ಮಂಗಳೂರು: ಆತ್ಮಹತ್ಯೆಗೈಯಲೆಂದು ಕುಮಾರಧಾರ ನದಿಗೆ ಹಾರಿ, ನದಿ ನಡುವೆ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಕಡಬ ತಾಲೂಕಿನ ಕೋಡಿಂಬಾಳದ ಪುಳಿಕುಕ್ಕು ಬಳಿ ಕುಮಾರಾಧಾರ ನದಿಯಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ ರವಿಕುಮಾರ್ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರೆನ್ನಲಾಗಿದೆ.
ಆದರೆ ರವಿಕುಮಾರ್ ನದಿ ಮಧ್ಯೆ ಪೊದೆ ಹಿಡಿದುಕೊಂಡು ರಕ್ಷಣೆಗಾಗಿ ಸಾರ್ವಜನಿಕರನ್ನು ಕೂಗಿ ಗಮನ ಸೆಳೆದಿದ್ದಾರೆ. ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಕಡಬ ಪೊಲೀಸ್, ಅಗ್ನಿಶಾಮಕ ದಳ, ಶೌರ್ಯ ತಂಡದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ವ್ಯಕ್ತಿಯನ್ನು ರಕ್ಷಣೆ ಮಾಡಿ ಕಡಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕಡಬ ಆಸ್ಪತ್ರೆಗೆ ತಹಶೀಲ್ದಾರ್ ಪ್ರಭಾಕರ್ ಖಜೂರೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.