ಕ್ಷಿಪ್ರ ಕಾರ್ಯಾಚರಣೆಯಲ್ಲಿ ಕೊಲೆ ಆರೋಪಿಯ ಬಂಧಿಸಿದ ಪೊಲೀಸರ ಬಗ್ಗೆ ಭಾರೀ ಮೆಚ್ಚುಗೆ
ಕಡಬ: ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲ ಶಾಲಾ ಜಗಲಿಯಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಶವ ಸಿಕ್ಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವುದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಕಡಬ ತಾಲೂಕಿನ ಎಡಮಂಗಲದ 35 ವರ್ಷದ ಉದಯ ಕುಮಾರ್ ನಾಯ್ಕ್ ಬಂಧಿತ ಆರೋಪಿ. 45 ವರ್ಷದ ವಸಂತ ವಿರಾಜಪೇಟೆ ಮೂಲದವನಾಗಿದ್ದು, ಉದಯ ಕುಮಾರ್ ಗೆ ಬಾರೊಂದರಲ್ಲಿ ಪರಿಚಿತನಾಗಿದ್ದ. ಇಬ್ಬರೂ ರವಿವಾರ ರಾತ್ರಿ ಕಾಂತಮಂಗಲಕ್ಕೆ ಆಟೊ ರಿಕ್ಷಾದಲ್ಲಿ ಬಂದು ಶಾಲಾ ಜಗಲಿಯಲ್ಲಿ ಮಲಗಿದ್ದರು. ವಸಂತನ ಬಳಿ 800 ರೂ. ಹಣವಿರುವುದು ಗಮನಿಸಿದ ಉದಯ ಆತನ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದು, ಬಳಿಕ ಹಣ ಹಾಗೂ ಮೊಬೈಲ್ ನೊಂದಿಗೆ ಪರಾರಿಯಾಗಿದ್ದಾನೆ.
ಸೋಮವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಕರಣವನ್ನು ಭೇದಿಸುವುದು ಪೊಲೀಸರಿಗೆ ಸವಾಲಾಗಿತ್ತು. ಆದರೆ ಕ್ಷಿಪ್ರಕಾರ್ಯಾಚರಣೆಯ ಮೂಲಕ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಮನೆಗೆ ತೆರಳದೆ ಅಲ್ಲಲ್ಲಿ ತಿರುಗಾಡುತ್ತಿದ್ದನೆನ್ನಲಾಗಿದೆ.
ಎಸ್ಪಿ ರಿಷ್ಯಂತ್ ಸಿ.ಬಿ., ಎಎಸ್ಪಿ ರಾಜೇಂದ್ರ ಡಿ.ಎಸ್., ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ ಮಾರ್ಗದರ್ಶನದಲ್ಲಿ ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಸತೀಶ್ ಜೆ.ಜೆ., ಸುಳ್ಯ ಎಸ್ಐ ಮಹೇಶ್, ಸುಬ್ರಹ್ಮಣ್ಯ ಎಸ್ಐ ಕಾರ್ತಿಕ್, ಸಿಬ್ಬಂದಿ ಉದಯ ಗೌಡ, ಪ್ರಕಾಶ್, ಉದಯ್, ಅನಿಲ್ ಸೇರಿದಂತೆ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.