ಉಡುಪಿ: ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್ ಉಡುಪಿಯ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಪತ್ನಿ ದೇವಿಶಾ ಶೆಟ್ಟಿ ಜೊತೆಗೆ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಸೂರ್ಯ ಕುಮಾರ್ ಯಾದವ್ ಭೇಟಿ ನೀಡಿದರು. ಈ ವೇಳೆ ಸ್ಟಾರ್ ಕ್ರಿಕೆಟರ್‌ಗೆ ಸ್ಥಳೀಯರು ಭವ್ಯ ಸ್ವಾಗತ ನೀಡಿದರು.
ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿದ ವೇಳೆ ದೇವಸ್ಥಾನದ ನಿರ್ಮಾಣ, ಕೆತ್ತನೆ, ಶಿಲ್ಪಕಲೆಯ ಬಗ್ಗೆ ಸೂರ್ಯಕುಮಾರ್ ದಂಪತಿ ಮಾಹಿತಿ ಪಡೆದರು.
ಮಾ. 2ರಂದು ದೇವಸ್ಥಾನದ ಬ್ರಹ್ಮಕಲಶ ಮಹೋತ್ಸವ ನಡೆಯಲಿದೆ. 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಹೊಸ ಮಾರಿಗುಡಿ ದೇವಸ್ಥಾನದಲ್ಲಿ 9 ದಿನಗಳ ಧಾರ್ಮಿಕ ವಿಧಿವಿಧಾನ ನೆರವೇರಲಿದೆ. ಈ ವೇಳೆ ಅವಕಾಶ ಸಿಕ್ಕರೆ ಖಂಡಿತಾ ಬರುತ್ತೇವೆ ಎಂದು ಸೂರ್ಯಕುಮಾರ್ ದಂಪತಿ ತಿಳಿಸಿದರು.
ವರ್ಲ್ಡ್ ಕಪ್ ಸೆಲೆಬ್ರೇಶನ್‌ಗೆ ಸೇರಿದ್ದ ಜನಸ್ತೋಮ ನೋಡಿ ಖುಷಿಯಾಯಿತು. ಕಾಪುವಿನಲ್ಲಿ ಕೂಡ ಜನರು ಪ್ರೀತಿಯಿಂದ ಬರಮಾಡಿಕೊಂಡದ್ದು ಮನಸ್ಸಿಗೆ ಮುಟ್ಟಿತು. ದೇವಸ್ಥಾನದಲ್ಲಿ ಇಷ್ಟು ಮಂದಿ ಸೇರುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ ಎಂದು ಖುಷಿ ವ್ಯಕ್ತಪಡಿಸಿದರು.
ʻಕಾಪುದ ಅಮ್ಮʼ ಎಂದು ತುಳುವಿನಲ್ಲಿ ಮಾತು ಆರಂಭಿಸಿದ ಸೂರ್ಯ ಕುಮಾರ್ ಯಾದವ್, ಟೀಂ ಇಂಡಿಯಾದ ನಾಯಕನಾಗಿ ಕಾಪುವಿಗೆ ಬನ್ನಿ ಎಂದು ಅರ್ಚಕರು ಪ್ರಾರ್ಥಿಸಿದರು. ಆದರೆ ಅದು ನಮ್ಮ ಕೈಯಲ್ಲಿಲ್ಲ. ದೇಶಕ್ಕಾಗಿ ಚೆನ್ನಾಗಿ ಆಡುವುದು ಮಾತ್ರ ನಮ್ಮ ಗುರಿ. ದೇವರು ಇಚ್ಚಿಸಿದರೆ, ಹಣೆಯಲ್ಲಿ ಬರೆಂತೆ ಆಗುತ್ತದೆ. ಕರಾವಳಿಯ ಬೇರೆಬೇರೆ ದೇವಸ್ಥಾನಗಳಿಗೆ ಹೋಗಿದ್ದೇವೆ ಮನಸ್ಸಿಗೆ ಶಾಂತಿ ಸಿಕ್ಕಿದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಪತ್ನಿ ದೇವಿಶಾ ಶೆಟ್ಟಿ, ಕಾಪು ಮಾರಿಯಮ್ಮನನ್ನು ನೋಡಲು ಪತಿಯನ್ನೂ ಕರೆದುಕೊಂಡು ಬಂದಿದ್ದೇನೆ. ದೇವಿಯಲ್ಲಿ ಏನು ಪ್ರಾರ್ಥಿಸಿದ್ದೇನೆ ಎಂದು ಹೇಳುವುದಿಲ್ಲ. ದೇವರಿಗೆ ಸೇವೆ ಕೊಡಬೇಕು ಎಂಬ ಸಂಕಲ್ಪವಿತ್ತು. ದೇವರಿಗೆ ಸಲ್ಲಿಸಿದ ಕಾಣಿಕೆಯನ್ನು ಹೇಳಿಕೊಳ್ಳಲು ಇಷ್ಟವಿಲ್ಲ. ಭಾರತವನ್ನು ಪ್ರತಿನಿಧಿಸಬೇಕು ಮತ್ತು ವರ್ಲ್ಡ್ ಕಪ್ ಗೆಲ್ಲಬೇಕು ಎಂಬುದು ಎಲ್ಲಾ ಕ್ರಿಕೆಟರ್‌ಗಳು ಕನಸು. ಒಂದು ಕನಸು ಸಾಕಾರಗೊಂಡಿದೆ ಎಂಬ ಖುಷಿ ಇದೆ. ಇಂತಹ ಹಲವಾರು ಕನಸುಗಳನ್ನು ಕಂಡು ಮುಂದೆ ಸಾಗಬೇಕಿದೆ ಎಂದರು.