ಮಂಗಳೂರು: ಮಂಗಳೂರು ರಿಫೈನರಿ ಪೆಟ್ರೊ ಕೆಮಿಕಲ್ಸ್ ಲಿಮಿಟೆಡ್‌ನ (ಎಂಆರ್‌ಪಿಎಲ್) ಮಾತೃಸಂಸ್ಥೆಯಾಗಿರುವ ಒಎನ್‌ಜಿಸಿ (ಆಯಿಲ್ ಆಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್) ಬಂಗಾಳಕೊಲ್ಲಿಯ ಕೃಷ್ಣಾ-ಗೋದಾವರಿ ಜಲಾನಯನ ಪ್ರದೇಶದ ತೈಲ ನಿಕ್ಷೇಪದಿಂದ ತೆಗೆದಿರುವ ಕೆಜಿ 98/2 ಕಚ್ಚಾ ತೈಲವನ್ನು ಹೊತ್ತ ಮೊದಲ ಹಡಗನ್ನು ಶನಿವಾರ ನವ ಮಂಗಳೂರು ಬಂದರಿನಲ್ಲಿ ಸ್ವಾಗತಿಸಲಾಯಿತು.
ಸ್ವರ್ಣ ಸಿಂಧು’ ಹಡಗಿನಲ್ಲಿ ಬಂದಿರುವ 60 ಸಾವಿರ ಮೆಟ್ರಿಕ್ ಟನ್ ಕಚ್ಚಾತೈಲವನ್ನು ಎಂಆರ್‌ಪಿಎಲ್ ಸಂಸ್ಕರಿಸಿ, ವಿವಿಧ ಇಂಧನ ಮತ್ತು ಪೆಟ್ರೊಕೆಮಿಕಲ್ಸ್ ಉತ್ಪನ್ನಗಳನ್ನು ತಯಾರಿಸಲಿದೆ.
‘ಇದು ಕಡಿಮೆ ಸಲ್ಫರ್ ಹೊಂದಿದ್ದು, ಸಿಹಿ ಕಚ್ಚಾತೈಲವಾಗಿದೆ. ಮಾರ್ಚ್ 2ರಂದು ಪ್ರಧಾನಿ ನರೇಂದ್ರ ಮೋದಿ ಅವರು ತೈಲವನ್ನು ಹೊತ್ತ ಹಡಗು ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದರು’ ಎಂದು ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಶ್ಯಾಮಪ್ರಸಾದ್ ಕಾಮತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ₹30 ಸಾವಿರ ಕೋಟಿ ಹೂಡಿಕೆಯೊಂದಿಗೆ 2016ರಲ್ಲಿ ಕೃಷ್ಣಾ-ಗೋದಾವರಿ ಜಲಾನಯನ ಪ್ರದೇಶದಲ್ಲಿ ಆರಂಭವಾದ ಯೋಜನೆ ಇದಾಗಿದೆ. ಪ್ರಸ್ತುತ 12 ಸಾವಿರ ಬ್ಯಾರೆಲ್ ಕಚ್ಚಾತೈಲ ಹೊರತೆಗೆಯಲಾಗುತ್ತಿದ್ದು, ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವ ವೇಳೆಗೆ ದಿನಕ್ಕೆ ಸುಮಾರು 45 ಸಾವಿರ ಬ್ಯಾರಲ್ ಕಚ್ಚಾತೈಲ ಮತ್ತು 10 ಮಿಲಿಯನ್ ಎಸ್‌ಸಿಎಂ (ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್) ನೈಸರ್ಗಿಕ ಅನಿಲ ಪಡೆಯಬಹುದೆಂದು ನಿರೀಕ್ಷಿಸಲಾಗಿದೆ’
ಎಂದು ವಿವರಿಸಿದರು.
‘ಭಾರತವು ತನ್ನ ಬೇಡಿಕೆಯ ಶೇ 85ರಷ್ಟು ಪ್ರಮಾಣದ ಕಚ್ಚಾತೈಲವನ್ನು ಹೊರದೇಶದಿಂದ ಮುಖ್ಯವಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಈ ನಿಕ್ಷೇಪದ ಮೂಲಕ ಭವಿಷ್ಯದಲ್ಲಿ ದೇಶದ ಕಚ್ಚಾ ತೈಲದ ಆಮದು ಪ್ರಮಾಣ ಶೇ 7ರಷ್ಟು ಕಡಿಮೆಯಾಗಲಿದೆ’ ಎಂದು ಎಂಆರ್‌ಪಿಎಲ್ (ರಿಫೈನರಿ) ನಿರ್ದೇಶಕ ಸಂಜಯ್ ವರ್ಮಾ ತಿಳಿಸಿದರು.
‘ಅಲ್ಲದೆ, ಭಾರತದ ವಿದೇಶಿ ವಿನಿಮಯದಲ್ಲಿ ಉಳಿತಾಯವಾಗಲಿದೆ. ಎಂಆರ್‌ಪಿಎಲ್ 250 ಮಾದರಿಯ ಕಚ್ಚಾ ತೈಲ ಸಂಸ್ಕರಣೆ ಸಾಮರ್ಥ್ಯ ಹೊಂದಿದ್ದು, 100 ಮಾದರಿಯ ತೈಲ ಸಂಸ್ಕರಣೆಗಳು ಇಲ್ಲಿ ನಡೆದಿವೆ’ ಎಂದರು