ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಮಂಗಳೂರು ಇದರ ಜಂಟಿ ಆಶ್ರಯದಲ್ಲಿ “ಟೆಕ್ನೋ ವೀಕ್ 2024” ತಾಂತ್ರಿಕ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಸಿವಿಲ್ ಇಂಜಿನಿಯರಿಂಗ್ ತಂತ್ರಜ್ಞರು ಹಾಗೂ ಬಂಟ್ವಾಳ ಸರಕಾರಿ ಪೊಲಿಟೆಕ್ನಿಕ್ ಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾದ ಡಾ. ಚಿನ್ನಗಿರಿ ಗೌಡ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀನಿವಾಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ. ಸತ್ಯನಾರಾಯಣ ರೆಡ್ಡಿ ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮುಖ್ಯಸ್ಥರಾದ ಡಾ. ರಾಮಕೃಷ್ಣ ಎನ್. ಹೆಗಡೆ, ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ.ಎಂ., ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಕೆ. ಶ್ರೀನಾಥ್ ರಾವ್, ಮತ್ತು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಸದಸ್ಯರಾದ ಶ್ರೀ ಯು. ನಿತಿನ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮುಖ್ಯಸ್ಥರಾದ ಡಾ. ರಾಮಕೃಷ್ಣ ಎನ್. ಹೆಗಡೆ ಯವರು ಮಾತನಾಡಿ, ಕೇವಲ 8% ಪದವೀಧರರು ಮಾತ್ರ ಹೊಸತನವನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ, 92% ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಮ್ಮ ಪದವಿಯ ನಂತರ ಏನು ಮಾಡಬೇಕೆಂದು ತಿಳಿದಿಲ್ಲ, ಪ್ರಸ್ತುತ ದೇಶದಲ್ಲಿ ನಾವೀನ್ಯತೆಗೆ ಸಾಕಷ್ಟು ಅವಕಾಶಗಳಿವೆ, ದೇಶದಲ್ಲಿ ಮೆಕ್ಯಾನಿಕಲ್ ಸಿವಿಲ್ ಮತ್ತು ಇಲೆಕ್ಟ್ರಿಕಲ್ ಇಂಜಿನಿಯರ್‌ಗಳ ಕೊರತೆಯಿದೆ ಎಂದು ಹೇಳಿದರು. ಕಠಿಣ ಪರಿಶ್ರಮ, ಜೊತೆಗೆ ಉತ್ತಮ ಶಿಸ್ತು ಮತ್ತು ಅಹಂಕಾರ ಮುಕ್ತ ಮನೋಭಾವದಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ಆದ್ದರಿಂದ, ನಾವು ನಮ್ಮ ಜೀವನದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ರವರ ಸಂದೇಶ, ಆದರ್ಶ ಮತ್ತು ತತ್ವಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಹಾಗೂ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡುವಂತಾಗಬೇಕು ಎಂದು ಕರೆ ನೀಡಿದರು.
ಉದ್ಘಾಟನಾ ಭಾಷಣವನ್ನು ಮಾಡಿದ ಡಾ. ಚಿನ್ನಗಿರಿ ಗೌಡ ರವರು, “ರಾಷ್ಟ್ರ ನಿರ್ಮಾಣದಲ್ಲಿ ಇಂಜಿನಿಯರುಗಳ ಪಾತ್ರ” ವಿಷಯದ ಮೇಲೆ ಉಪನ್ಯಾಸವನ್ನು ನೀಡಿದರು. ಸೈದ್ಧಾಂತಿಕ ಜ್ಞಾನದ ಜೊತೆಗೆ ಪ್ರಾಯೋಗಿಕ ಜ್ಞಾನವು ಬಹಳ ಮುಖ್ಯ. ಆದ್ದರಿಂದ, ಸಾಮಾಜಿಕ ಆರ್ಥಿಕ ಅಭಿವೃದ್ಧಿ, ಸದೃಢ ಸಮಾಜ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಇಂಜಿನಿಯರುಗಳು ಉತ್ತಮ ಕೊಡುಗೆಯನ್ನು ನೀಡಬೇಕು, ಇದರ ಜೊತೆಗೆ ಪ್ರಾಚೀನ ಮತ್ತು ಪುರಾತನ ಕಟ್ಟಡಗಳ ರಕ್ಷಣೆಯ ಜವಾಬ್ದಾರಿ ಇಂಜಿನಿಯರುಗಳ ಮೇಲಿದೆ ಎಂದು ಡಾ. ಚಿನ್ನಗಿರಿ ಗೌಡ ರವರು ಹೇಳಿದರು. ಸಂಪನ್ಮೂಲಗಳು, ತಂತ್ರಜ್ಞಾನ, ಸುರಕ್ಷತೆ ನಿರ್ವಹಣೆ ಮತ್ತು ಸೌಕರ್ಯಗಳ ಸಮಗ್ರ ಸಂಯೋಜನೆಯೇ ಇಂಜಿನಿಯರಿಂಗ್. ಆಧುನಿಕ ಜಗತ್ತಿನ ಬೇಡಿಕೆಗಳ ಜೊತೆಗೆ ಪರಿಸರ, ಜಲ, ವನ, ಇಂಧನ, ಆಹಾರ ಮೊದಲಾದವುಗಳ ಸಂರಕ್ಷಣೆಗೆ ವಿಶೇಷ ಗಮನ ನೀಡಿ, ಸುಸ್ಥಿರ ಅಭಿವೃದ್ಧಿಯ ಮೂಲಕ ಸದೃಢ ರಾಷ್ಟ್ರ ನಿರ್ಮಾಣವನ್ನು ಮಾಡುವಲ್ಲಿ ಎಲ್ಲಾ ಇಂಜಿನಿಯರುಗಳು ಉತ್ತಮ ಕೊಡುಗೆಯನ್ನು ನೀಡಬೇಕು ಎಂದು ಡಾ. ಚಿನ್ನಗಿರಿ ಗೌಡ ರವರು ಕಿವಿಮಾತು ಹೇಳಿದರು.
ಅಧ್ಯಕ್ಷೀಯ ಭಾಷಣವನ್ನು ಮಾಡಿದ ಶ್ರೀನಿವಾಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ. ಸತ್ಯನಾರಾಯಣ ರೆಡ್ಡಿ ಯವರು ಮಾತನಾಡಿ, ಇಂಜಿನಿಯರ್‌ಗಳು ಸೃಜನಶೀಲರಾಗಿರಬೇಕು, ಇಂಜಿನಿಯರ್‌ಗಳು ಸಮಸ್ಯೆಯನ್ನು ವಿಶ್ಲೇಷಿಸಿ, ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಹೇಳಿದರು. ಟೈಟಾನಿಕ್ ಹಡಗಿನ ಉದಾಹರಣೆಯನ್ನು ಉಲ್ಲೇಖಿಸಿದ ಡಾ. ಕೆ. ಸತ್ಯನಾರಾಯಣ ರೆಡ್ಡಿಯವರು, ಯಾವುದೇ ವಿನ್ಯಾಸವನ್ನು ಮಾಡುವಾಗ ಸ್ಥಿರ ಹಾಗೂ ಸುಸ್ಥಿರ ವಿನ್ಯಾಸವನ್ನು ಮಾಡಬೇಕು, ಆ ವಿನ್ಯಾಸವನ್ನು ಎಲ್ಲಾ ರೀತಿಯ ಸಾಧಕ, ಬಾಧಕ ಮತ್ತು ಸಾಧ್ಯತೆಗಳ ವಿರುದ್ಧ ಪರೀಕ್ಷಿಸಬೇಕು, ಮತ್ತು ಆ ವಿನ್ಯಾಸದ ಶಕ್ತಿಯನ್ನು ಪರಿಪೂರ್ಣವಾಗಿ ಕಂಡುಕೊಳ್ಳಬೇಕು ಎಂದು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಹೇಳಿದರು.
ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಕೆ. ಶ್ರೀನಾಥ್ ರಾವ್ ರವರು ಸ್ವಾಗತ ಭಾಷಣವನ್ನು ಮಾಡಿದರು, ಹಾಗೂ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಂಘಟನೆ “ಸೃಷ್ಟಿಕ” ಅಧ್ಯಕ್ಷರಾದ ಶ್ರೀ ವರುಣ್ ಎನ್. ಮಧ್ಯಸ್ಥ ರವರು ವಂದನಾರ್ಪಣೆ ಸಲ್ಲಿಸಿದರು. ಕುಮಾರಿ ಅಪರ್ಣಾ ದೇವ್ ರವರು ಪ್ರಾರ್ಥನೆಯನ್ನು ಮಾಡಿದರು. ಪ್ರೊ. ರೋಹನ್ ಫೆರ್ನಾಂಡಿಸ್ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಕಾಲೇಜಿನ ವಿವಿಧ ಇಂಜಿನಿಯರಿಂಗ್ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಸೃಷ್ಟಿಕ ಉಪಾಧ್ಯಕ್ಷ ರಾಹುಲ್ ರಾಜೇಶ್ ರೈ, ಕಾರ್ಯದರ್ಶಿ ರತನ್ ರಮೇಶ್ ಪುತ್ರನ್, ಪದಾಧಿಕಾರಿಗಳಾದ ಕುಮಾರಿ ಕಾರ್ತಿಕಾ ಮತ್ತು ಮೊಹಮ್ಮದ್ ಜಹಸನ್ ಮತ್ತಿತರರು ಉಪಸ್ಥಿತರಿದ್ದರು.