ಮಹಾರಾಷ್ಟ್ರ: ವೇಗವಾಗಿ ಬಂದ ಟೆಂಪೋ ಐವರು ಪಾದಚಾರಿಗಳ ಮೇಲೆ ಹರಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ಕುರ್ಲಾ ಪಕ್ಕದ ಘಾಟ್‌ಕೋಪರ್‌ನಲ್ಲಿ ಸಂಭವಿಸಿದೆ.
ಮೃತ ಮಹಿಳೆಯನ್ನು ಪಶ್ಚಿಮದ ಘಾಟ್‌ಕೋಪರ್ ನಿವಾಸಿ ಪ್ರೀತಿ ಪಟೇಲ್ (35) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ರೇಷ್ಮಾ ಶೇಖ್, ಮಾರುಫಾ ಶೇಖ್, ಮೊಹಮ್ಮದ್ ಅಲಿ ಅಬ್ದುಲ್ ಶೇಖ್, ಓಜರ್ ಶೇಖ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತದ ನಂತರ ಟೆಂಪೋ ಚಾಲಕ ಉತ್ತಮ್ ಖಾರತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಟೆಂಪೋ ಸಂಜೆ 6.30 ರ ಸುಮಾರಿಗೆ ನಾರಾಯಣನಗರದಿಂದ ತಂಪು ಪಾನೀಯಗಳೊಂದಿಗೆ ಬರುತ್ತಿದ್ದು, ಅತಿವೇಗದಲ್ಲಿ ಚಲಿಸುತ್ತಿತ್ತು. ಸ್ಟೇರಿಂಗ್ ಟೆಂಪೋ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ ಎಂದು ವಲಯ ಉಪ ಪೊಲೀಸ್ ಕಮಿಷನರ್ ಹೇಳಿದ್ದಾರೆ.