ಕಟಪಾಡಿ: ಕುದುರೆಮುಖ ಎಸ್.ಕೆ. ಬಾರ್ಡರ್ ಸಮೀಪ ಟೂರಿಸ್ಟ್ ವಾಹನವೊಂದು ಹೊತ್ತಿ ಉರಿದು ಕಟಪಾಡಿ ಮೂಲದ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶನಿವಾರ ನಡೆದಿದೆ.
ಟೂರಿಸ್ಟ್ ವಾಹನದಲ್ಲಿ ಚಾಲಕ ಸಹಿತ ಪುರುಷರು, ಇಬ್ಬರು ಮಕ್ಕಳು, ಮಹಿಳೆಯರೂ ಸೇರಿದಂತೆ ಉಚ್ಚಿಲ, ಎರ್ಮಾಳು, ಪಣಿಯೂರು, ಕಟಪಾಡಿ, ಉಡುಪಿಯ ಭಾಗದ ಒಟ್ಟು 14 ಮಂದಿ ಪ್ರಯಾಣಿಕರಿದ್ದರು.
ಎಸ್.ಕೆ. ಬಾರ್ಡರ್ ಸಮೀಪ ಟೆಂಪೋ ಟ್ರಾವೆಲರ್‌ನ ತಳಭಾಗದಲ್ಲಿ ಸುಟ್ಟ ವಾಸನೆಯೊಂದಿಗೆ ಹೊಗೆ ಕಾಣಿಸಿಕೊಂಡಿದ್ದು, ಪ್ರವಾಸಿಗರನ್ನು ಕೂಡಲೇ ರಸ್ತೆ ನಡುವೆ ಕೆಳಗಿಸಿದ್ದು, ಈ ವೇಳೆ ಟೂರಿಸ್ಟ್ ವಾಹನಕ್ಕೆ ಬೆಂಕಿ ಆವರಿಸಿ ಹೊತ್ತಿ ಉರಿದಿದೆ. ಕಟಪಾಡಿ ಏಣಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷ ಅಖೀಲೇಶ್ ಕೋಟ್ಯಾನ್ ದಂಪತಿ ಸಹಿತ 13 ಮಂದಿ ಪ್ರವಾಸಿಗರು ಪ್ರಯಾಣಿಸುತ್ತಿದ್ದು, ದೈವ ದೇವರ ಕಾರಣಿಕದಿಂದ ಬದುಕಿದೆವು ಎನ್ನುತ್ತಾರೆ ಈ ಪ್ರವಾಸಿಗರ ತಂಡ.
ಕಟಪಾಡಿಯಿಂದ ಪ್ರತೀ ವರ್ಷದಂತೆ 7-8 ಕುಟುಂಬವು ಈ ಬಾರಿಯೂ ಪಿಕ್‌ನಿಕ್ ತೆರಳಿದ್ದು, ಎಸ್.ಕೆ. ಬಾರ್ಡರ್ ಮೊದಲು ಸಿಗುವ ಚೆಕ್‌ಪೋಸ್ಟ್ ದಾಟಿ 6-7 ಕಿ.ಮೀ. ಕ್ರಮಿಸಿದ ವೇಳೆ ಏಕಾಏಕಿಯಾಗಿ ಸುಟ್ಟ ವಾಸನೆ ಬಂದಿತ್ತು. ಚಾಲಕ ಸುಮಾರು 2 ಕಿ.ಮೀ.ನಷ್ಟು ಮುಂದಕ್ಕೆ ಪ್ರಯಾಣಿಸಿದಾಗ ಅಪಾಯವನ್ನು ಗ್ರಹಿಸಿದ ಕಾಂಗ್ರೆಸ್ ಮುಖಂಡ ಅಖೀಲೇಶ್ ಕೋಟ್ಯಾನ್ ಅವರು ತಕ್ಷಣವೇ ಎಲ್ಲರನ್ನೂ ರಸ್ತೆ ಮಧ್ಯೆ ವಾಹನದಿಂದ ಕೆಳಕ್ಕೆ ಇಳಿಸಿದರು. ಎಲ್ಲರೂ ಕೆಳಗಿಳಿಯುತ್ತಿದ್ದಂತೆಯೇ ಕೆಲವೇ ಕ್ಷಣದಲ್ಲಿ ಟೆಂಪೋ ಹೊತ್ತಿ ಸುಟ್ಟು ಕರಕಲಾಯಿತು.