ಜೈಪುರ: ಎರಡು ಸಿಎನ್‌ಜಿ ಟ್ಯಾಂಕರ್‌ಗಳು ಪರಸ್ಪರ ಡಿಕ್ಕಿ ಹೊಡೆದ ಭಾರೀ ಬೆಂಕಿ ಹೊತ್ತಿಕೊಂಡು ನಾಲ್ವರು ಸಜೀವ ದಹನವಾಗಿ 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ರಾಜಸ್ಥಾನ ಜೈಪುರದ ಭಂಕ್ರೋಟಾ ಪ್ರದೇಶದ ಪೆಟ್ರೋಲ್ ಪಂಪ್‌ನಲ್ಲಿ ಸಂಭವಿಸಿದೆ.
ಶುಕ್ರವಾರ ಮುಂಜಾನೆ 5:30ರ ಸುಮಾರಿಗೆ ಅಜ್ಮೀರ್ ರಸ್ತೆಯಲ್ಲಿ ಘಟನೆ ನಡೆದಿದೆ. ಟ್ರಕ್ ಇತರ ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಎನ್‌ಜಿ ಟ್ಯಾಂಕರ್‌ಗೂ ಬೆಂಕಿ ಹೊತ್ತಿಕೊಂಡಿದೆ. ನಾಲ್ವರು ಸಜೀವ ದಹನವಾಗಿದ್ದು, 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಸವಾಯಿ ಮಾನ್ಸಿಂಗ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲು ಮಾಡಲಾಗಿದೆ. ಅಧಿಕಾರಿಗಳ ಪ್ರಕಾರ ಇನ್ನೂ ಹಲವಾರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ತಕ್ಷಣ ಪೊಲೀಸರು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. 20ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲೇ ಬೆಂಕಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಸಮೀಪದ ಮಾರ್ಗವನ್ನು ಬೇರೆಡೆಗೆ ಬದಲಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಇತರ ವಾಹನಗಳಿಗೆ ಡಿಕ್ಕಿ ಹೊಡೆದ ಟ್ರಕ್‌ನಲ್ಲಿ ರಾಸಾಯನಿಕ ತುಂಬಿತ್ತು. ಟ್ರಕ್ ಡಿಕ್ಕಿ ಹೊಡೆಯುತ್ತಿದ್ದಂತೆ ಬೆಂಕಿ ಹೊತ್ತಿ, ಇತರ ವಾಹನಗಳಿಗೂ ವ್ಯಾಪಿಸಿದೆ. ಎಷ್ಟು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸದ್ಯಕ್ಕೆ ಖಚಿತ ಮಾಹಿತಿ ಇಲ್ಲ. ಸಂತ್ರಸ್ತರನ್ನು ಭೇಟಿ ಮಾಡಲು ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಕೂಡ ಆಸ್ಪತ್ರೆಗೆ ಧಾವಿಸಿದ್ದಾರೆ.