ತಿರುವನಂತಪುರ: 5 ವರ್ಷಗಳಿಂದ ತನ್ನ ಮೇಲೆ 60 ಮಂದಿ ನಿರಂತರ ಅತ್ಯಾಚಾರವೆಸಗಿದ್ದಾರೆ ಎಂಬ ಅಘಾತಕಾರಿ ಅಂಶವನ್ನು ಕೇರಳದ 18 ವರ್ಷದ ಯುವತಿಯೊಬ್ಬರು ಬಹಿರಂಗಪಡಿಸಿರುವ ಘಟನೆ ಪತ್ತನಂತಿಟ್ಟದಲ್ಲಿ ವರದಿಯಾಗಿದೆ.
ಸಂತ್ರಸ್ತೆಯ ನೋವಿನ ಕಥೆ ಕೇಳಿದ ಮಕ್ಕಳ ಕಲ್ಯಾಣ ಸಮಿತಿ ಪೊಲೀಸರಿಗೆ ಮಾಹಿತಿ ರವಾನಿಸಿದೆ. ಪೊಲೀಸರ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ 60ಕ್ಕೂ ಹೆಚ್ಚು ಆರೋಪಿಗಳಿದ್ದಾರೆ ಎಂದು ಬಾಲಕಿ ಹೇಳಿದ್ದಾಳೆ. ಎಲವುಂತಿಟ್ಟ ಪೊಲೀಸರು ಈ ಪ್ರಕರಣದಲ್ಲಿ ಇದುವರೆಗೆ ಐದು ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ತನಂತಿಟ್ಟದ ಚೆನ್ನೀರ್ಕರ ನಿವಾಸಿಗಳಾದ ಸುಬಿನ್, 24, ಎಸ್ ಸಂದೀಪ್(30), ವಿಕೆ ವಿನೀತ್(30), ಕೆ.ಆನಂದು(21), ಮತ್ತು ಶ್ರೀನಿ ಅಲಿಯಾಸ್ ಎಸ್ ಸುಧಿ ಶ್ರೀನಿ, (24), ಬಂಧನಕ್ಕೊಳಗಾದ ಆರೋಪಿಗಳಾಗಿದ್ದಾರೆ. ಬಂಧಿತ ವ್ಯಕ್ತಿಗಳ ಮೊಬೈಲ್ ಫೋನ್‌ಗಳಲ್ಲಿನ ಫೋಟೋಗಳಿಂದ ತನ್ನ ಮೇಲೆ ದೌರ್ಜನ್ಯ ಎಸಗಿದ ಇತರ 40 ಜನರನ್ನು ಬಾಲಕಿ ಗುರುತಿಸಿದ್ದಾಳೆ.
ಬಾಲಕಿ 16 ವರ್ಷದವಳಿದ್ದಾಗ, ಸುಬಿನ್ ಆಕೆಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಆ ಕೃತ್ಯದ ವೀಡಿಯೊಗಳನ್ನು ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದ. ಇದರ ನಂತರ ಆಕೆಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಲೈಂಗಿಕ ದೌರ್ಜನ್ಯದ ಈ ದೃಶ್ಯಗಳನ್ನು ಸುಬಿನ್ ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದು, ಅವರು ಕೂಡ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ನಿರಂತರ ದೌರ್ಜನ್ಯದ ಪರಿಣಾಮ ಬಾಲಕಿಯ ಶೈಕ್ಷಣಿಕ ಸಾಧನೆಯಲ್ಲಿಯೂ ಕುಸಿತ ಕಂಡುಬಂದಿತ್ತು. ಕೌನ್ಸೆಲಿಂಗ್ ಅವಧಿಯಲ್ಲಿ ಮಹಿಳಾ ಸಬಲೀಕರಣ ಸಮೂಹದ ಎದುರು ಈ ವಿಷಯವನ್ನು ಮೊದಲು ಬಹಿರಂಗಪಡಿಸಿದ್ದಾರೆ. ‘ತನಿಖೆ ಮುಂದುವರೆದಂತೆ ಇನ್ನಷ್ಟು ಆರೋಪಿಗಳನ್ನು ಗುರುತಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಮಹಿಳಾ ಸಬಲೀಕರಣ ಸಮೂಹ ಸಿಡಬ್ಲ್ಯೂಸಿಗೆ ಮಾಹಿತಿ ನೀಡಿತ್ತು. ಇದಾದ ನಂತರ, ಯುವತಿ ತನ್ನ ತಾಯಿಯೊಂದಿಗೆ ಘಟನೆಯನ್ನು ಸಿಡಬ್ಲ್ಯೂಸಿ ಸದಸ್ಯರಿಗೆ ವಿವರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪತ್ತನಂತಿಟ್ಟ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ. ವಿವಿಧ ಠಾಣೆಗಳಲ್ಲಿ ತನಿಖೆ ಮುಂದುವರೆದಂತೆ ಹೆಚ್ಚಿನ ಆರೋಪಿಗಳನ್ನು ಗುರುತಿಸುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.