ದೆಹಲಿಯ ದಿಯೋಲಿಯಲ್ಲಿ ತ್ರಿವಳಿ ಕೊಲೆ ನಡೆದಿದೆ. ದಂಪತಿ ಮತ್ತು ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೊದಲ ಮಹಡಿಯಲ್ಲಿ ಗಂಡನ ಶವ ಪತ್ತೆಯಾಗಿದ್ದು, ನೆಲ ಮಹಡಿಯಲ್ಲಿ ಪತ್ನಿ ಮತ್ತು ಮಗಳ ಶವ ಪತ್ತೆಯಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ದಕ್ಷಿಣ ದೆಹಲಿ ಜಿಲ್ಲೆಯ ಡಿಸಿಪಿ ಅಂಕಿತ್ ಚೌಹಾಣ್, ಬೆಳಿಗ್ಗೆ 7:00ರ ಸುಮಾರಿಗೆ ಕರೆ ಬಂದಿದ್ದು, ಅದರಲ್ಲಿ ಮೂವರಿಗೆ ಇರಿದು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿತ್ತು.
ಮನೆಯ ಮಗನೇ ಕರೆ ಮಾಡಿದ್ದನು. ವಿಚಾರಿಸಿದಾಗ ತಾನೂ ಬೆಳಗಿನ ವಾಕಿಂಗ್‌ಗೆ ಹೋಗಿದ್ದೆ ಎಂದು ಮಗ ಹೇಳಿದ್ದು ಮನೆಗೆ ಹಿಂತಿರುಗಿ ಬಂದಾಗ ಮೂವರೂ ಕೊಲೆಯಾಗಿರುವುದು ಕಂಡೆ ಎಂದು ಹೇಳಿದ್ದನು. ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡವನ್ನು ಕರೆಸಲಾಗಿದ್ದು, ಎಲ್ಲ ಸಂಗತಿಗಳನ್ನು ಆಳವಾಗಿ ಪರಿಶೀಲಿಸಲಾಗುತ್ತಿದೆ ಎಂದು ಡಿಸಿಪಿ ಅಂಕಿತ್ ಚೌಹಾಣ್ ತಿಳಿಸಿದ್ದಾರೆ.
ಮನೆಯಲ್ಲಿ ಯಾವುದೇ ರೀತಿಯ ವಿಧ್ವಂಸಕ ಕೃತ್ಯ ನಡೆದಿರುವ ಕುರುಹುಗಳು ಪತ್ತೆಯಾಗಿಲ್ಲ ಎಂದು ಡಿಸಿಪಿ ತಿಳಿಸಿದ್ದಾರೆ. ಹಂತಕನು ಮನೆಗೆ ಹೇಗೆ ಪ್ರವೇಶಿಸಿದ್ದಾನೆ ಎಂಬುದನ್ನು ಕಂಡುಹಿಡಿಯಲು ನಾವು ತನಿಖೆ ನಡೆಸುತ್ತಿದ್ದೇವೆ. ಎಲ್ಲಾ ಬೀಗಗಳು ಒಳಗಿನಿಂದ ಲಾಕ್ ಆಗಿದ್ದವು, ಆದರೆ ಮೇಲಿನ ಛಾವಣಿಯ ಬೀಗ ಒಳಗಿನಿಂದ ತೆರೆದಿರುವುದು ಕಂಡು ಬಂದಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಕೊಲೆಗಾರ ಹರಿತವಾದ ಆಯುಧ ಬಳಸಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ. ಸುಮಾರು ಒಂದೂಕಾಲು ಗಂಟೆಯಲ್ಲಿ ಇಷ್ಟೆಲ್ಲಾ ಘಟನೆ ನಡೆದಿದೆ.
ಕೊಲೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಲು ಹಲವು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಡಿಸಿಪಿ ಅಂಕಿತ್ ಚೌಹಾಣ್ ಹೇಳಿದ್ದಾರೆ. ಮೊದಲ ಮಹಡಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ತಾಯಿ ಮತ್ತು ಮಗಳ ಮೃತದೇಹ ನೆಲ ಮಹಡಿಯಲ್ಲಿ ಪತ್ತೆಯಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಮೃತರಲ್ಲಿ ರಾಜೇಶ್ (55), ಕೋಮಲ್ (47) ಮತ್ತು ಅವರ ಪುತ್ರಿ ಕವಿತಾ (23) ಮೃತ ದುರ್ದೈವಿಗಳು. ಬೆಳಗಿನ ವಾಕಿಂಗ್ ಮುಗಿಸಿ ಹಿಂತಿರುಗಿದಾಗ ಮನೆಯಲ್ಲಿ ಮೂವರೂ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಮಗ ಕಂಡಿದ್ದಾನೆ. ಕೊಲೆ ವಿಚಾರ ಬಹಿರಂಗಗೊಂಡ ಬೆನ್ನಲ್ಲೇ ಸ್ಥಳದಲ್ಲಿ ಕೋಲಾಹಲ ಉಂಟಾಗಿದ್ದು ನೆರೆಹೊರೆಯವರು ಜಮಾಯಿಸಿದ್ದಾರೆ. ಮಾಹಿತಿ ಸಿಕ್ಕ ತಕ್ಷಣ ದೆಹಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಪ್ರಕರಣದ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.