ಕೋಟ: ಇತಿಹಾಸ ಪ್ರಸಿದ್ದ ಗರಿಕೆಮಠ ಅರ್ಕ ಗಣಪತಿ ಕ್ಷೇತ್ರವು ದಕ್ಷಿಣ ಭಾರತದಲ್ಲೇ ಅಪರೂಪವಾಗಿ ನಡೆಯುತ್ತಿರುವ ಲಕ್ಷಲಿಂಗಾರ್ಚನ ವಿಧಿ ಎನ್ನುವ ಧಾರ್ಮಿಕ ಕಾರ್ಯಕ್ರಮಕ್ಕೆ ಸಜ್ಜುಗೊಳ್ಳುತ್ತಿದೆ. ಗರಿಕೆಮಠ ಕ್ಷೇತ್ರದ ಮುಖ್ಯಸ್ಥ ಆಗಮಪ್ರವೀಣ. ಶೈವ ಸಿದ್ಧಾಂತಿ, ಶ್ರೀ ವಿದ್ಯಾ ಉಪಾಸಕ ವೇ। ರಾಮಪ್ರಸಾದ ಅಡಿಗರ ನೇತೃತ್ವದಲ್ಲಿ ಯು.ಕೆ.ಯ ದೀಪೇಶ್, ಎಂ.ದೊಡಿಯಾ ಅವರ ಸೇವೆಯಾಗಿ ಆ.31 ಹಾಗೂ ಸೆ.1ರಂದು ಈ ಕಾರ್ಯಕ್ರಮ ನೆರವೇರಲಿದೆ.
ಲಕ್ಷ ಲಿಂಗಾರ್ಚನವಿಧಿ ಧಾರ್ಮಿಕ ಕಾರ್ಯಕ್ರಮ ಹೆಚ್ಚಾಗಿ ಉತ್ತರಪ್ರದೇಶ, ಕಾಶಿಯಂಥ ಮಹಾಕ್ಷೇತ್ರದಲ್ಲಿ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ಈ ಕಾರ್ಯಕ್ರಮ ಅಪರೂಪವಾಗಿದ್ದು ಅದರಲ್ಲೂ ಕರ್ನಾಟಕದಲ್ಲಿ ಇದು ಪ್ರಥಮ ಎನ್ನಲಾಗಿದೆ. ಮಣ್ಣಿನಿಂದ ಒಂದು ಲಕ್ಷ ಲಿಂಗಗಳನ್ನು ತಯಾರಿಸಿ, ನೂರಾರು ಸಂಖ್ಯೆಯ ಪುರೋಹಿತರು ಧಾರ್ಮಿಕ ವಿಧಿ-ವಿಧಾನಗಳ ಮೂಲಕ ನ್ಯಾಸಾದಿಗಳೊಂದಿಗೆ ಲಿಂಗಾರ್ಚನೆ, ರುದ್ರಪಾರಾಯಣ, ಲಕ್ಷಲಿಂಗ ಪೂಜಾವ್ರತಗಳನ್ನು ನೆರವೇರಿಸಿ ಪೂಜೆ ಸಲ್ಲಿಸುತ್ತಾರೆ.
ಗರಿಕೆಮಠ ಕಾರಣಿಕ ಕ್ಷೇತ್ರ ಸ ಸಮೀಪ ಶಿರಿಯಾರ ಗ್ರಾಮದ ಗರಿಕೆಮಠದಲ್ಲಿರುವ ಅರ್ಕ ಗಣಪತಿ ದೇವಸ್ಥಾನ ಅತ್ಯಂತ ಕಾರಣಿಕ ವಾಗಿದ್ದು ದಕ್ಷಿಣ ಭಾರತದಲ್ಲೇ ಅಪರೂಪದ ಅರ್ಕಗಣಪತಿಯ ಶಿಲಾಮಯ ವಿಗ್ರಹದ ಇಲ್ಲಿದೆ. ಇಲ್ಲಿನ ಅಡಿಗರ ಕುಟುಂಬಸ್ಥರು ಜ್ಯೋತಿಷ್ಯ, ವೇದ, ಪಾಂಡಿತ್ಯಕ್ಕೆ ಶತಮಾನದಿಂದ ಖ್ಯಾತರಾಗಿದ್ದಾರೆ. ಹಲವು ರೀತಿಯ ಕಷ್ಟಗಳಿಂದ ನೊಂದು ಬಂದ ಭಕ್ತರು ಕ್ಷೇತ್ರವನ್ನು ಸಂದರ್ಶಿಸಿ, ಅಡಿಗರ ಸಲಹೆ ಯಿಂದ ಕಷ್ಟಪರಿಹಾರ ಮಾಡಿಕೊಂಡಿದ್ದಾರೆ. ದಿ। ರಾಮಣ್ಣ ಅಡಿಗ, ದಿ| ಅನಂತ ಅಡಿಗ, ದಿ। ವೆಂಕಟರಾಮ ಅಡಿಗ, ದಿ। ಅನಂತಪದ್ಮನಾಭ ಅಡಿಗರ ಬಳಿಕ ಈಗ ಅವರ ಮಗ ವೇ। ಜಿ.ರಾಮಪ್ರಸಾದ ಅಡಿಗರು ಕ್ಷೇತ್ರವನ್ನು ಮುನ್ನಡೆಸುತ್ತಿದ್ದಾರೆ. ಇವರು ಊರಿನವರು ಹಾಗೂ ಭಕ್ತರನ್ನು ಸೇರಿಸಿಕೊಂಡು ಲೋಕ ಕಲ್ಯಾಣಕ್ಕಾಗಿ ಶ್ರೀನಿವಾಸ ಕಲ್ಯಾಣ, ಕಾಶೀ ಗಂಗಾರತಿ, ಸೀತಾ ಕಲ್ಯಾಣ, ಕಾಶಿ ಗಂಗಾರತಿ, ಸೀತಾ ಕಲ್ಯಾಣ ಕಾರ್ಯಕ್ರಮವನ್ನು ನಡೆಸಿದ್ದಾರೆ.
ಕಾರ್ಯಕ್ರಮದ ವಿವರ ಆ.31ರಂದು ಬೆಳಗ್ಗೆ 7ಕ್ಕೆ ಗುರುಗಣಪತಿ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭ. ಕೈಲಾಸ ಪ್ರಸ್ತಾರನಿರ್ಮಾಣ, ನ್ಯಾಸಾದಿಗಳು, ಲಕ್ಷ ಲಿಂಗಗಳ ಸ್ಥಾಪನೆ, ತ್ರಿಕಾಲ ಪೂಜೆ ನಡೆಯಲಿದೆ. ಸೆ.1ರಂದು ಬೆಳಗ್ಗೆ 8ಕ್ಕೆ ಲಕ್ಷ ಲಿಂಗಾರ್ಚನೆ, ಆವರಣಾರ್ಚನೆ, ಮಹಾನ್ಯಾಸ ಪೂರ್ವಕ ರುದ್ರಪಾರಾಯಣ, ಶತ ಕಲಶಾಭಿಷೇಕ, ರುದ್ರಯಾಗ, ಲಕ್ಷ ಲಿಂಗ ಪೂಜಾವ್ರತ ಕಾರ್ಯಕ್ರಮ ಗಳುನಡೆಯಲಿದ್ದು, ಅಪರಾಹ್ನ 12ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.