ಬಂಟ್ವಾಳ:ಮಕ್ಕಳಿಗೆ ಬಾಲ್ಯದಿಂದಲೇ ಶ್ರೀರಾಮನ ನಡೆ ಮತ್ತು ಶ್ರೀಕೃಷ್ಣನ ನುಡಿ ತಿಳಿಸಿದಾಗ ಅವರು ಸಾಧನಾಶೀಲರಾಗಿ ದೇಶದ ಆಸ್ತಿಯಾಗಲು ಸಾಧ್ಯವಾಗುತ್ತದೆ ಎಂದು ಉದ್ಯಮಿ ಸಂದೇಶ ಶೆಟ್ಟಿ ಮಂಗಳೂರು ಹೇಳಿದ್ದಾರೆ.
ಇಲ್ಲಿನ ರಾಯಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಭಾನುವಾರ ಸಂಜೆ ಸಮಾರೋಪಗೊಂಡ ೩೦ನೇ ವರ್ಷದ ಮೊಸರುಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾವಂತೂರು ಬಲವಂಡಿ ಕ್ಷೇತ್ರದ ಗಡಿಪ್ರಧಾನ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ನಿವೃತ್ತ ಮುಖ್ಯಶಿಕ್ಷಕ ಕೆ.ರಮೇಶ ನಾಯಕ್ ರಾಯಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ ಆಚಾರ್ಯ, ಕಂಬಳ ಪ್ರೋತ್ಸಾಹಕ ರಾಜೇಶ ಶೆಟ್ಟಿ ಸೀತಾಳ, ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ಶುಭ ಹಾರೈಸಿದರು. ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಅರ್ಚಕ ದಿನೇಶ ಭಟ್, ಶಿಲ್ಪಿ ಹರೀಶ ರಾಯಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ ಆಚಾರ್ಯ, ಪ್ರಮುಖರಾದ ಸಂತೋಷ್ ಕುಮಾರ್ ಚೌಟ, ರಾಜೇಶ ಗೋವಿಂದಬೆಟ್ಟು, ಡೊಂಬಯ ಅರಳ, ದಿನೇಶ ಶೆಟ್ಟಿ ದಂಬೆದಾರ್, ಶೇಖರ ಅಂಚನ್ ಪಿಲ್ಕಾಜೆಗುತ್ತು, ಲೋಕೇಶ ಕೈತ್ರೋಡಿ, ಶರತ್ ಕುಮಾರ್ ಕೊಯಿಲ ಮತ್ತಿತರರು ಇದ್ದರು.
ಇದೇ ವೇಳೆ ವಿವಿಧ ಆಟೋಟ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ಪ್ರತಿಭಾನ್ವಿತ ವಿದ್ಯಾರ್ಥಿನಿ ಮನಿಷಾ ಮತ್ತು ಅಕ್ಷರ ದಾಸೋಹ ಸಿಬ್ಬಂದಿಗಳಿಗೆ ಸನ್ಮಾನ, ೧೫ ಮಂದಿ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಸಮಿತ್ ರಾಯಿ ಸ್ವಾಗತಿಸಿ, ವಂದಿಸಿದರು. ಪ್ರಜ್ವಲ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.