ನಿಯಂತ್ರಣ ತಪ್ಪಿ ಡಿವೈಡರ್‌ಗೆ ಬಿದ್ದ ಬೈಕಿನಿಂದ ಎಸೆಯಲ್ಪಟ್ಟ ಸಹ ಸವಾರೆ ಗೃಹಿಣಿಯೋರ್ವರು ದಾರುಣವಾಗಿ ಸಾವಿಗೀಡಾದ ಘಟನೆಯೊಂದು ಭಾನುವಾರ ಸಂಜೆ ನಡೆದಿದೆ. ಈ ಘಟನೆ ಅಸೈಗೋಳಿಯ ತಿಬ್ಲೆ ಪದವಿನ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಅಪಘಾತದ ದೃಶ್ಯವು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದರ ಡ್ಯಾಷ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತ ಮಹಿಲೆಯನ್ನು ನಿಧಿ (29) ಎಂದು ಗುರುತಿಸಲಾಗಿದೆ. ಇವರು ಬೋಂದೆಲ್ ನಿವಾಸಿ ದೀಕ್ಷಿತ್ ಅವರ ಪತ್ನಿ. ನಿಧಿ ಅವರು ಮುಡಿಪುವಿನಲ್ಲಿ ನಡೆದಿದ್ದ ಗೃಹಪ್ರವೇಶಕ್ಕೆಂದು ಹೋಗಿದ್ದು, ಯತೀಶ್ ಎಂಬುವವರ ಜೊತೆ ಬೈಕಿನಲ್ಲಿ ಮನೆಗೆಂದು ವಾಪಾಸ್ ಬರುವ ಸಮಯದಲ್ಲಿ ಅಂದರೆ ಸಂಜೆ 7.25 ರ ಸುಮಾರಿಗೆ ತಿಬ್ಲೆ ಪದವು ಎಂಬಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಬೈಕ್ ಡಿವೈಡರ್‌ಗೆ ನೆಗೆದು ಪಕ್ಕದ ರಸ್ತೆಗೆ ಬಿದ್ದಿದೆ. ಬೈಕ್‌ನಲ್ಲಿದ್ದ ನಿಧಿ, ಚಾಲಕ ಯತೀಶ್ ಇಬ್ಬರೂ ರಭಸದಿಂದ ರಸ್ತೆಗೆಸೆಯಲ್ಪಟ್ಟಿದ್ದಾರೆ.
ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತ ಹೊಂದಿದ್ದಾರೆ. ಹಾಗೆನೇ ಯುವಕ ಕೂಡಾ ಗಂಭೀರಗಾಯಗೊಂಡಿದ್ದಾನೆ. ಈ ಘಟನೆ ಕುರಿತು ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.