ಬಂಟ್ವಾಳ: ಇಂದೇ ನಡೆಯಲಿರುವ ತಮ್ಮ ವಿವಾಹ ಸಮಾರಂಭದ ನಡುವೆಯೂ ವಧುವೊಬ್ಬರು ಮತದಾನದ ಕರ್ತವ್ಯವನ್ನು ನಿರ್ವಹಿಸಿದ ಸಂಗತಿ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿಯಲ್ಲಿನ ಮತಗಟ್ಟೆಯಲ್ಲಿ ವೀರಕಂಬ ನಿವಾಸಿ ಕಮಲಾಕ್ಷ ಪೂಜಾರಿಯವರ ದ್ವಿತೀಯ ಪುತ್ರಿ ವಿನುತಾ ಇಂದು ತನ್ನ ವಿವಾಹ ಮೂಹೂರ್ತದ ಮೊದಲು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ವೀರಕಂಬ ಮಜಿ ಮತಗಟ್ಟೆಯಲ್ಲಿ ಬಿಸಿಲಿನ ಝಳ ಲೆಕ್ಕಿಸದೆಯೂ ಜನ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ಶುಭ ಕಾರ್ಯಕ್ರಮಗಳಿದ್ದರೂ ಬೆಳಗ್ಗಿನಿಂದಲೇ ಎರಡು ಮತ ಕೇಂದ್ರಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.