ಉತ್ತರ ಪ್ರದೇಶದ ಬರೇಲಿಯಲ್ಲಿ ಗೂಗಲ್ ಮ್ಯಾಪ್ಸ್‌ನಲ್ಲಿನ ಎಡವಟ್ಟಿನ ಕಾರಣದಿಂದ ಭಾರೀ ದುರಂತ ಸಂಭವಿಸಿದೆ. ಮದುವೆ ಮನೆಗೆ ರೀಚ್ ಆಗಲು ವ್ಯಕ್ತಿಗಳು ಗೂಗಲ್ ಮ್ಯಾಪ್ಸ್ ನೆಚ್ಚಿಕೊಂಡಿದ್ದರು. ಆದರೆ, ಗೂಗಲ್ ಮ್ಯಾಪ್ ಕಾಮಗಾರಿ ನಡೆಯುತ್ತಿದ್ದ ಬ್ರಿಜ್‌ಅನ್ನು ದಾರಿಯಾಗಿ ತೋರಿಸಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ಸಾಗಿದ ಕಾರು, ನದಿಗೆ ಉರುಳಿ ಬಿದ್ದು ಮೂವರು ಸಾವು ಕಂಡಿರುವ ಘಟನೆ ನಡೆದಿದೆ. ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಸಹಾಯದಿಂದ ಸಂಚಾರ ಮಾಡುತ್ತಿದ್ದ ಕಾರು ಇನ್ನೂ ಕಾಮಗಾರಿ ನಡೆಯುತ್ತಿದ್ದ ಸೇತುವೆಯಿಂದ ಉರುಳಿ ನದಿಗೆ ಬಿದ್ದಿದೆ. ಇದರಿಂದಾಗಿ ಮದುವೆ ಮನೆಗೆ ಹೋಗ್ತಿದ್ದ ಮೂವರು ಮಸಣದ ದಾರಿ ಹಿಡಿದಿದ್ದಾರೆ.
ಭಾನುವಾರ ಬರೇಲಿಯಿಂದ ಬದೌನ್ ಜಿಲ್ಲೆಯ ದಾತ್‌ಗಂಜ್‌ನಲ್ಲಿ ನಡೆಯಬೇಕಿದ್ದ ಮದುವೆ ಮನೆಗೆ ಹೊರಟಿತ್ತು. ಬೆಳಗ್ಗೆ 10 ಗಂಟೆಯ ವೇಳೆಗೆ ಖಲ್ಪುರ್-ದಾತ್‌ಗಂಜ್ ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದ್ದ ಸೇತುವೆಯ ಮಾಹಿತಿ ತಿಳಿಯದೇ ವೇಗವಾಗಿ ಚಲಿಸಿದೆ. ಈ ವೇಳೆ ಕಾರು ರಾಮ್‌ಗಂಗಾ ನದಿಗೆ ಉರುಳಿ ಬಿದ್ದಿದ್ದು ಪ್ರಯಾಣ ಮಾಡುತ್ತಿದ್ದ ಮೂವರು ಸಾವು ಕಂಡಿದ್ದಾರೆ. ಇತ್ತೀಚಿನ ಪ್ರವಾಹದ ವೇಳೆ ಸೇತುವೆಯ ಭಾಗ ಕುಸಿದಿತ್ತು. ಆದರೆ, ಇದು ಜಿಪಿಎಸ್‌ನಲ್ಲಿ ಪರಿಷ್ಕರಣೆ ಆಗದ ಹಿನ್ನಲೆಯಲ್ಲಿ ಈ ದುರಂತ ಸಂಭವಿಸಿದೆ.
ಸಾವು ಕಂಡಿರುವ ಇಬ್ಬರನ್ನು ವಿವೇಕ್ ಹಾಗೂ ಅಮಿತ್ ಎಂದು ಗುರುತಿಸಲಾಗಿದೆ. ಗುರುಗ್ರಾಮದಿಂದ ಹೊರಟಿಟ್ದದ ಅವರು ದಾತ್‌ಗಂಜ್‌ನಲ್ಲಿ ಸ್ನೇಹಿತನ ಮದುವೆಗಾಗಿ ತೆರಳಿದ್ದರು. 50 ಫೀಟ್‌ನಿಂದ ಕೆಳಗೆ ಕಾರು ಬಿದ್ದಿದ್ದರಿಂದ ಮೂವರು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಬಹಳ ಸಮಯದ ಬಳಿಕ ಸ್ಥಳೀಯರು ಸೇತುವೆಯ ಮೇಲಿನಿಂದ ಕಾರು ಬಿದ್ದಿದ್ದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ನಜ್ಜುಗುಜ್ಜಾದ ಕಾರ್‌ನಿಂದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.