ಮೂಡುಬಿದಿರೆ, ಜ.17: ದೇವರಾಜ ಅರಸು ಕಾಲದಲ್ಲಿ ಜಾರಿಗೆ ಬಂದ ಭೂಮಸೂದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದ ಪರಿಣಾಮವಾಗಿ ಗೇಣಿದಾರರು ಸ್ವಂತ ಹಿಡುವಳಿದಾರರಾದದ್ದು ಕ್ರಾಂತಿಕಾರಿ ಬದಲಾವಣೆ. ಆದರೆ, ಯಾವುದೇ ಭೂಮಿ ಇಲ್ಲದೆ ಸರಕಾರಿ ಜಮೀನಿನಲ್ಲಿ ಮನೆಕಟ್ಟಿ ಕುಳಿತವರಿಗೆ ನಿವೇಶನದ ಹಕ್ಕುಪತ್ರ ನೀಡುವ ಪ್ರಕ್ರಿಯೆ ನಡೆಯ ತೊಡಗಿದ ಬಳಿಕ ಸ್ವಂತದ್ದಾದ ನಿವೇಶನದಲ್ಲಿ ಮನೆಕಟ್ಟಿ ವಾಸವಾಗುವ ಕನಸು ನನಸಾಗತೊಡಗಿದೆ. ಈ ದಿಸೆಯಲ್ಲಿ ಜನಪ್ರತಿನಿದಿಗಳ ಜತೆಗೆ ಕಂದಾಯ ಅಽಕಾರಿಗಳು, ಸಿಬಂದಿಗಳ ಸಹಕಾರ ಶ್ಲಾಘನೀಯ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸಮಾಜ ಮಂದಿರದ ಸ್ವರ್ಣಮಂದಿರದಲ್ಲಿ ಶಾಸಕ ಉಮಾನಾಥ ಎ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮೂಡುಬಿದಿರೆ ತಾಲೂಕಿನ 334 ಮಂದಿ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡಿದ ಅವರು ಚುನಾವಣ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವದೇ ವಿಳಂಬವಿಲ್ಲದೆ ಜಾರಿಗೊಳಿಸಿ ಕೊಟ್ಟ ಮಾತನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ನೆರವೇರಿಸಿ ಬದ್ದತೆ ಮೆರೆದಿದೆ ಎಂದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಶಾಸಕ ಉಮಾನಾಥ ಎ. ಕೋಟ್ಯಾನ್, ತನ್ನ ಶಾಸಕತ್ವದ ಈ ಹಿಂದಿನ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲೇ ಈ ತಾಲೂಕಿನಲ್ಲಿ ಗರಿಷ್ಟ ಸಂಖ್ಯೆಯಲ್ಲಿ ಹಕ್ಕುಪತ್ರ ನೀಡಲಾಗಿದ್ದು ಈ ಬಾರಿ 5ತಿಂಗಳಿಂದ ತಾನು ಗ್ರಾಮ ಗ್ರಾಮಗಳಿಗೆ ತೆರಳಿ, ಅಧಿಕಾರಿಗಳ ಹಾಗೂ ಸಿಬಂದಿಗಳ ಮನವೊಲಿಸಿ ಒಟ್ಟು 334 ಹಕ್ಕುಪತ್ರಗಳನ್ನು ಸಿದ್ಧಪಡಿಸಲು ಸಾಧ್ಯವಾಗಿದ್ದು ಪರಿಶ್ರಮಪಟ್ಟಿರುವ ಎಲ್ಲ ಅಧಿಕಾರಿಗಳು ಹಾಗೂ ಸಿಬಂದಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.
ಮುಖ್ಯಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, `ಮೂಡ’ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಪುರಸಭೆ ಮುಖ್ಯಧಿಕಾರಿ ಇಂದು ಎಂ., ಗ್ಯಾರಂಟಿ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಭಾಗವಹಿಸಿದ್ದರು.
ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಉಪತಹಶೀಲ್ದಾರ್ ಬಾಲಚಂದ್ರ, ತಾ.ಪಂ. ಕಾರ್ಯನಿರ್ವಹಣ ಅಽಕಾರಿ ಕುಸುಮಾಧರ, ಕಂದಾಯ ನಿರೀಕ್ಷಕ ಮಂಜುನಾಥ್, ವಿವಿಧ ಗ್ರಾಮಗಳ ಕಂದಾಯ ಅಧಿಕಾರಿಗಳು , ಕೆಪಿಸಿಸಿ ಪ್ರ.ಕಾರ್ಯದರ್ಶಿ ಮಿಥುನ್ ರೈ, ಪುರಸಭೆ, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.
ಹಕ್ಕುಪತ್ರ -ಅರ್ಜಿ ಸಲ್ಲಿಸಿದ 90 ಶೇ.ಗೂ ಅಧಿಕ ಮಂದಿಗೆ ನಿವೇಶನ
ಬೆಳುವಾಯಿ (94ಸಿ 94,ಸಿಸಿಯಲ್ಲಿ ) ತೆಂಕಮಿಜಾರು 30, ಕಲ್ಲಮುಂಡ್ಕೂರು 8, ವಾಲ್ಪಾಡಿ 78
ಪುಚ್ಚಮೊಗರು 24, ಕಡಂದಲೆ 16, ಪಾಲಡ್ಕ 4, ಇರುವೈಲು 32, ಪುತ್ತಿಗೆ 9, ನೆಲ್ಲಿಕಾರು 1, ಮಾಂಟ್ರಾಡಿ 6 , ಕೆಲ್ಲಪುತ್ತಿಗೆ 2, ದರೆಗುಡ್ಡೆ 2, ಪಣಪಿಲ 13, ಪಡುಮಾರ್ನಾಡು 14, ಮೂಡುಮಾರ್ನಾಡು 26, ಮಾರೂರು 2, ತೋಡಾರು 4, ಶಿರ್ತಾಡಿ 5, ಹೊಸಬೆಟ್ಟು 7, ಮಾರ್ಪಾಡಿ 16, ಪ್ರಾಂತ್ಯ 6, ಪಡುಕೊಣಾಜೆ 6, ಮೂಡುಕೊಣಾಜೆ 16
ತಹಶೀಲ್ದಾರ ಪ್ರದೀಪ್ ಕುರ್ಡೇಕರ್ ಸ್ವಾಗತಿಸಿ, 2015ರ ಮೊದಲು ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿರುವ 334 ಮಂದಿ ಫಲಾನುಭವಿಗಳಿಗೆ (ಗ್ರಾಮೀಣ ಪ್ರದೇಶದವರಿಗೆ 94ಸಿ, ಪುರಸಭೆ, ಸರಹದ್ದಿನವರಿಗೆ 94ಸಿಸಿ) ಹಕ್ಕುಪತ್ರ ಸಿದ್ಧಗೊಳಿಸಲಾಗಿದೆ ಎಂದರು.
ನವೀನ್‌ಚಂದ್ರ ಅಂಬೂರಿ ನಿರೂಪಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಅಧ್ಯಕ್ಷತೆಯ ಸಮಾಜಮಂದಿರ ಸಭಾ ವತಿಯಿಂದ ಲಘುಉಪಾಹಾರ ವ್ಯವಸ್ಥೆಮಾಡಲಾಗಿತ್ತು.