ಕಾರ್ಕಳ:ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸೇವಾ ಮನೋಭಾವದೊಂದಿಗೆ ಘನತೆಯ ಜೀವನವನ್ನು ನಡೆಸಿರುವ ಹಿರಿಯ ಸಾಧಕರ ಆದರ್ಶಗಳೇ ನಮ್ಮ ಬಾಳಿನ ಬೆಳಕಾಗಿದೆ ಎಂದು ಹಿರಿಯ ಸಾಂಸ್ಕೃತಿಕ ಚಿಂತಕರಾದ ಮುನಿರಾಜ ರೆಂಜಾಳ ಹೇಳಿದರು. ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಆಶ್ರಯದಲ್ಲಿ ನಡೆದ “ಹಿರಿಯರೆಡೆಗೆ ಸಾಹಿತ್ಯದ ನಡಿಗೆ” ಕಾರ್ಯಕ್ರಮದಲ್ಲಿ ಬಜಗೋಳಿ ನಲ್ಲೂರಿನ ಹಿರಿಯ ಸಮಾಜ ಸೇವಕರಾದ ಜಗತ್ಪಾಲ ಕಡಂಬರನ್ನು ಅಭಿನಂದಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕಿನ ಇಪ್ಪನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಕೆ. ಗುಣಪಾಲ ಕಡಂಬರು ಸಮಾಜದ ನೊಂದವರ ಪರವಾಗಿ ನಿಂತು ನ್ಯಾಯಕ್ಕಾಗಿ ಹೋರಾಟ ಮಾಡಿದ ಜಗತ್ಪಾಲ ಕಡಂಬರ ಜನಪರ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಕಸಾಪದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ವಹಿಸಿದ್ದರು.
ಕಾರ್ಯಕ್ರಮ ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ತಕ್ಷರಾದ ನೀಲಾವರ ಸುರೇಂದ್ರ ಅಡಿಗ,ಕರ್ನಾಟಕ ರಾಜ್ಯ ಕ್ವಾರಿ ಕ್ರಷರ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಡಾ.ರವೀಂದ್ರ ಶೆಟ್ಟಿ ಬಜಗೋಳಿ,ರಂಗ ಸಂಸ್ಕೃತಿ ಕಾರ್ಕಳದ ಅಧ್ಯಕ್ಷರಾದ ಉದ್ಯಮಿ ನಿತ್ಯಾನಂದ ಪೈ, ಹಿರಿಯ ಸಾಹಿತಿ ಉಪೇಂದ್ರ ಸೋಮಯಾಜಿ, ರೂಪ ರವೀಂದ್ರ ಶೆಟ್ಟಿ,ಕಸಾಪ ಪದಾಧಿಕಾರಿಗಳಾದ ಡಾ. ಸುಮತಿ, ಶಿವ ಸುಬ್ರಹ್ಮಣ್ಯ ಭಟ್, ಸೂಡ ದೇವುದಾಸ್ , ಸುಲೋಚನಾ ತಿಪ್ಪೇಸ್ವಾಮಿ, ಶ್ರೀವತ್ಸ ಮೊದಲಾದವರು ಉಪಸ್ಥಿತರಿದ್ದರು. ನಲ್ಲೂರು ಹಿರಿಯ ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗೇಶ್ ಸ್ವಾಗತಿಸಿ, ಕಸಾಪ ಗೌರವ ಕಾರ್ಯದರ್ಶಿ ದೇವದಾಸ ಕೆರೆಮನೆ ವಂದಿಸಿದರು.