ಮೂಡುಬಿದ್ರೆ: ಬೆದ್ರದ ಮಣ್ಣಿನ ಮಗಳಿಗೆ ಸುಂದರ ಹಾಗೂ ಐತಿಹಾಸಿಕ ಪ್ರತಿಮೆಯನ್ನು ಚೌಟರ ಅರಮನೆಯ ಎದುರುಗಡೆ ಮರುಸ್ಥಾಪಿಸುವ ಮೂಲಕ ಹೊಸ ಸಾಧನೆ ಮಾಡಿದ ಜವನೆರ್ ಬೆದ್ರ ಫೌಂಡೇಶನ್(ರಿ.) ಇತಿಹಾಸದ ಪುಟದಲ್ಲಿ ದಾಖಲಾಗುವ ಐತಿಹಾಸಿಕ ಕೆಲಸವೊಂದನ್ನು ಮಾಡಿದೆ. ಸಮಾಜದಲ್ಲಿರುವ ಆಶಕ್ತರ ಏಳೀಗೆಯ ಕುರಿತು ಸದಾ ಯೋಚಿಸುವ ಅಮರ್ ಕೋಟೆ ನೇತೃತ್ವದ ಜವನೆರ್ ಬೆದ್ರ ಫೌಂಡೇಶನ್(ರಿ.) ಅಬ್ಬಕ್ಕ’ಳ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ದಿನೇಶ್ ಗುಂಡೂರಾವ್’ಗೆ ಮೂಡುಬಿದ್ರೆಯ ಜನಸಾಮಾನ್ಯರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಸಂಘಟನೆ ಮೂರು ಪ್ರಮುಖ ಮನವಿಗಳನ್ನು ಸಲ್ಲಿಸಿದೆ.
ಮೂಡುಬಿದಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ದರ್ಜೆಗೇರಿಕೆ
ಆರೋಗ್ಯ ಸೇವೆ ಪ್ರತಿಯೊಬ್ಬ ನಾಗರೀಕನಿಗೂ ಸರಿಯಾದ ಸಮಯದಲ್ಲಿ ಲಭ್ಯವಾಗಬೇಕು. ಅಧುನಿಕ ದಿನಮಾನಗಳಲ್ಲಿ ಖಾಸಗೀ ವೈದ್ಯಕೀಯ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಜನಸಾಮಾನ್ಯರಿಗೆ ಬಹಳ ಕಷ್ಟಕರಾಗಿದೆ ಆ ನಿಟ್ಟಿನಲ್ಲಿ ಮೂಡುಬಿದಿರೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದರಿಂದ, ಈಗಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ (Sub-Divisional Hospital / Taluk Level Hospital) ಏರಿಸುವಂತೆ ವಿನಂತಿಸುತ್ತೇವೆ. ಇದರಿಂದ ಸ್ಥಳೀಯ ನಾಗರಿಕರಿಗೆ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳು ದೊರೆಯಲಿದ್ದು, ತುರ್ತು ವೈದ್ಯಕೀಯ ಸೇವೆಗಳಿಗೂ ಬಲ ನೀಡುತ್ತದೆ.
ಮೂಡುಬಿದಿರೆಯಲ್ಲಿ ಸರ್ಕಾರಿ ರಕ್ತ ಬ್ಯಾಂಕ್ / ರಕ್ತ ಶೇಖರಣಾ ಘಟಕ ಸ್ಥಾಪನೆ
ಮೂಡುಬಿದಿರೆಯಲ್ಲಿ ಪ್ರಸ್ತುತ ಖಾಸಗಿ ರಕ್ತ ಬ್ಯಾಂಕ್‌ಗಳು ಮಾತ್ರ ಲಭ್ಯವಿದ್ದು, ಅವುಗಳಲ್ಲಿ ರಕ್ತದ ಪೂರೈಕೆಗೆ ಹೆಚ್ಚಿನ ಮೊತ್ತ ವಿಧಿಸಲಾಗುತ್ತದೆ. ಇದರಿಂದ ಆರ್ಥಿಕವಾಗಿ ದುರ್ಬಲ ಕುಟುಂಬಗಳು ತೀವ್ರ ತೊಂದರೆ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಸಾರ್ವಜನಿಕ ಹಿತಾಸಕ್ತಿಯನ್ನು ಮನನ ಮಾಡಿಕೊಂಡು, ಮೂಡುಬಿದಿರೆಯಲ್ಲಿ ಸರ್ಕಾರದ ಅಧೀನದಲ್ಲಿನ ಶಾಶ್ವತ ರಕ್ತ ಬ್ಯಾಂಕ್ ಅಥವಾ ರಕ್ತ ಶೇಖರಣಾ ಘಟಕ ಸ್ಥಾಪಿಸಲು ವಿನಂತಿಸಲಾಗಿದೆ. ಇದು ತುರ್ತು ಆರೋಗ್ಯ ಸೇವೆಗಳಲ್ಲಿ ಜೀವ ರಕ್ಷಣೆಗೆ ಮಹತ್ವದ ಸಹಾಯ ಮಾಡಲಿದೆ.
ಚೌಟ ರಾಣಿ ಅಬ್ಬಕ್ಕ ಸಂಶೋಧನಾ ಕೇಂದ್ರ ಸ್ಥಾಪನೆ
ಮೂಡುಬಿದಿರೆ ಪ್ರದೇಶವು ಶ್ರೀಮಂತ ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆಯೊಂದಿಗೆ “ಜೈನ್ ಕಾಶಿ” ಎಂದೂ ಪ್ರಸಿದ್ಧವಾಗಿದೆ. ಇಲ್ಲಿ ಅನೇಕ ಪ್ರಾಚೀನ ಬಸದಿಗಳು, ದೇವಾಲಯಗಳು ಮತ್ತು ಸಾಂಸ್ಕೃತಿಕ ಧಾರ್ಮಿಕ ಸ್ಮಾರಕಗಳಿವೆ. ತುಳುನಾಡಿನ ವೀರ ನಾರಿಯಾದ ಚೌಟ ರಾಣಿ ಅಬ್ಬಕ್ಕ ಅವರ ಶೌರ್ಯ, ದೇಶಭಕ್ತಿ ಮತ್ತು ಸ್ತ್ರೀಶಕ್ತಿ ಕುರಿತು ಸಂಶೋಧನೆ ಹಾಗೂ ಅಧ್ಯಯನ ನಡೆಯುವಂತೆಯೂ, ಅವರ ಹೆಸರಿನಲ್ಲಿ ಸಂಶೋಧನಾ ಕೇಂದ್ರ (Research Centre) ಸ್ಥಾಪಿಸುವಂತೆಯೂ ವಿನಂತಿಸಲಾಗಿದೆ.
ಈ ಮೂಲಕ ಜನಸಾಮಾನ್ಯರ ಸಹಾಯಕ್ಕಾಗಿ ೨ ಮನವಿ ಹಾಗೂ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಹಾಯಕಾರಿಯಾಗಲು ೧ ಮನವಿ ಒಟ್ಟಾರೆಯಾಗಿ ಮೂರು ಮನವಿಗಳನ್ನು ಸಚಿವರಿಗೆ ಸಲ್ಲಿಸುವ ಮೂಲಕ ಮತ್ತೊಂದು ಉತ್ತಮ ಕೆಲಸವನ್ನು ಫೌಂಡೇಶನ್ ಮಾಡಿದೆ. ಜವನೆರ್ ಬೆದ್ರ ಫೌಂಡೇಶನ್ ತನ್ನೆಲ್ಲಾ ಒತ್ತಡದ ಕೆಲಸದ ಮಧ್ಯೆಯೂ ಸಚಿವರು ಭೇಟಿ ಕೊಟ್ಟಾಗ ಆ ಅವಕಾಶವನ್ನು ಬಳಸಿಕೊಂಡಿರುವುದು ಅತ್ಯಂತ ಶ್ಲಾಘನೀಯ ಕೆಲಸ ಎಂದು ಬಣ್ಣಿಸಲಾಗುತ್ತಿದೆ. ಈ ಮೂರು ಮನವಿಗಳನ್ನು ಸಚಿವರು ಸರ್ಕಾರದ ಮುಂದಿಟ್ಟು ಅತ್ಯಂತ ಶೀಘ್ರದಲ್ಲಿ ಬೆದ್ರಕ್ಕೆ ಒದಗಿಸುವ ನಿರೀಕ್ಷೆಯಲ್ಲಿದ್ದಾರೆ.

