Monday, January 13, 2025
Homeಮಂಗಳೂರುದ. ಕ. ಜಿಲ್ಲಾ ಮಂಗಳೂರು ತಾಲೂಕು ಘಟಕದ ಪರಿಷತ್ತಿಗೆ ಜೂರಿಕ್ ಕನ್ನಡ ಕೂಟ ಸಂಚಾಲಕರ ಭೇಟಿ

ದ. ಕ. ಜಿಲ್ಲಾ ಮಂಗಳೂರು ತಾಲೂಕು ಘಟಕದ ಪರಿಷತ್ತಿಗೆ ಜೂರಿಕ್ ಕನ್ನಡ ಕೂಟ ಸಂಚಾಲಕರ ಭೇಟಿ

ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ವಿದೇಶಿ ರಾಯಭಾರಿ ಡಾ.ಮುರಲೀ ಮೋಹನ್ ಚೂಂತಾರ್ ರವರ ಮನೆ ‘ಸರೋಜಿನಿ’ಯಲ್ಲಿ’ ಜೂರಿಕ್‌ನಲ್ಲಿ ಕನ್ನಡ ಡಿಂಡಿಮ’ ಎಂಬ ಸಂಭ್ರಮದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಡಾ. ಪ್ರಭಿತಾ, ಸಂಚಾಲಕರು, ಜೂರಿಕ್ ಕನ್ನಡ ಕೂಟ, ಸ್ವಿಟ್ಜರ್ಲೆಂಡ್ ಇವರು ಮಂಡ್ಯದಲ್ಲಿ ನಡೆದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಆಗಮಿಸಿದ್ದು, ಹಿಂತಿರುಗುವ ಹಾದಿಯಲ್ಲಿ ದ. ಕ. ಜಿಲ್ಲಾ ಮಂಗಳೂರು ತಾಲೂಕು ಘಟಕದ ಪರಿಷತ್ತಿಗೆ ಭೇಟಿ ನೀಡಿದರು. ನಗರದ ಬಿಜೈ ‘ಸರೋಜಿನಿ’ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರತ್ನಾವತಿ ಜೆ. ಬೈಕಾಡಿಯವರು ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಪ್ರಾಯೋಜಿಸಿ ಆತಿಥ್ಯ ವಹಿಸಿಕೊಂಡಿದ್ದ ಡಾ. ಮುರಲೀ ಮೋಹನ್ ಚೂಂತಾರ್ ನಿರೂಪಿಸಿದರು. ಪರಿಷತ್ತಿನ ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣಕರ್ ಅಧ್ಯಕ್ಷತೆ ವಹಿಸಿದ್ದರು.
ಜೂರಿಕ್ ಕನ್ನಡ ಕೂಟದ ಸಂಚಾಲಕರಾದ ಡಾ. ಪ್ರಭಿತಾರವರು ಅಲ್ಲಿನ ಕನ್ನಡ ಸಾಹಿತ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ, ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಕನ್ನಡ ಉಳಿಸಿ ಬೆಳೆಸಲು ಪರಿಷತ್ತಿನ ಸಹಕಾರ ಕೋರಿದರು. ಪರಿಷತ್ತು ವತಿಯಿಂದ ಅವರನ್ನು ಪುಸ್ತಕ ಸ್ಮರಣಿಕೆ ಗಳೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ಅತಿಥಿಗಳೊಂದಿಗೆ ಸಾಹಿತ್ಯ ಸಂವಾದ ನಡೆಯಿತು. ಗೌರವ ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಗೌರವ ಕಾರ್ಯದರ್ಶಿ ಎನ್. ಗಣೇಶ್ ಪ್ರಸಾದ್ ಜೀ ವಂದಿಸಿದರು. ಪರಿಷತ್ತಿನ ಸುಖಲಾಕ್ಷಿ ಸುವರ್ಣ, ಸನತ್ ಕುಮಾರ್ ಜೈನ್, ಡಾ. ಶ್ರೀಕೃಷ್ಣ ಭಟ್ಟ ಸುಣ್ಣಂಗುಳಿ, ರವೀಂದ್ರನಾಥ್ ಕೆ. ಪಿ., ಗುರು, ಡಾ. ರಾಜಶ್ರೀ ಮೋಹನ್, ಸಿರಿ ಮತ್ತಿತರ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಕನ್ನಡ ಗೀತೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.

RELATED ARTICLES
- Advertisment -
Google search engine

Most Popular