ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿಯೊಂದರ ಮಾಜಿ ಅಧ್ಯಕ್ಷನ ಮಗ. ರಾಜಕೀಯ ಹವಾದ ಜೊತೆಗೆ ಎಲೆಕ್ಟ್ರಿಕಲ್ ಹಾಗೂ ಪ್ಲಂಬಿಗ್ ಕೆಲಸ ಮಾಡಿಕೊಂಡು ಓಡಾಡಿಕೊಂಡಿದ್ದ. ಕಳೆದ ಮೂರು ದಿನಗಳಿಂದ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವ ಇಂದು ಶವವಾಗಿ ಪತ್ತೆಯಾಗಿದ್ದಾನೆ. ಕುಡಿದ ಅಮಲಿನಲ್ಲಿ ದುಷ್ಕರ್ಮಿಗಳು ಬಿಯರ್ ಬಾಟಲಿಯಿಂದ ಚುಚ್ಚಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರ ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿಯ ಚಿಕ್ಕಬಳ್ಳಾಪುರ ತಾಲ್ಲೂಕಿನ ಮರಸನಹಳ್ಳಿ ಬಳಿ ಪಾಳುಬಿದ್ದ ಬಡಾವಣೆಯೊಂದು ಇದೆ. ಕೆಲವು ಪಡ್ಡೆ ಹೈಕ್ಳಿಗೆ, ಕುಡುಕರ ಅಡ್ಡೆಯಾಗಿದೆ. ಇದೇ ಬಡಾವಣೆಯಲ್ಲಿಂದು ಚಿಕ್ಕಬಳ್ಳಾಪುರ ತಾಲ್ಲೂಕು ಹಾರೋಬಂಡೆ ಗ್ರಾಮಪಂಚಾಯಿತಿಯ ಮಾಜಿ ಅಧ್ಯಕ್ಷ ನಾಗರೆಡ್ಡಿ ಅವರ ಮಗ 25 ವರ್ಷದ ಮಾರುತೇಶ್ ಶವವಾಗಿ ಪತ್ತೆಯಾಗಿದ್ದಾನೆ.
ಶವದ ಮುಖಕ್ಕೆ ಬಿಯರ್ ಬಾಟಲಿಯಿಂದ ತಿವಿದಂತೆ ಕಂಡುಬಂದಿದೆ. ಘಟನಾ ಸ್ಥಳದಲ್ಲಿ ಮೃತನ ಬೈಕ್ ಹಾಗೂ ಮದ್ಯಪಾನ ಮಾಡಿ ಬಿಯರ್ ಬಾಟಲಿಗಳನ್ನ ಒಡೆದುಹಾಕಲಾಗಿದೆ. ಇದ್ರಿಂದ ಕುಡಿದ ಅಮಲಿನಲ್ಲಿ ಮಾರುತೇಶ್ ನನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಹಾಗೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಇನ್ನು ಮೃತ ಯುವಕ ಮಾರುತೇಶ್ ರಾಜಕೀಯದ ಜೊತೆಗೆ ಚಿಕ್ಕಬಳ್ಳಾಪುರದಲ್ಲಿ ಎಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ಕೆಲಸ ಮಾಡಿಕೊಂಡಿದ್ದ. ಇನ್ನು ಪಕ್ಕದ ಗ್ರಾಮದಲ್ಲಿದ್ದ ವಿವಾಹಿತೆಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿರುವ ಆರೋಪವೂ ಕೇಳಿಬಂದಿತ್ತು. ಇನ್ನು ಮೂರು ದಿನಗಳ ಹಿಂದೆ ನಾಪತ್ತೆಯಾದವ ಇಂದು ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ವೈಯುಕ್ತಿಕ ಅಥವಾ ಹಳೆಯ ದ್ವೇಷವೋ, ಇಲ್ಲವೇ ಅನೈತಿಕ ಸಂಬಂಧದಿಂದ ಕೊಲೆಯೋ ಅನ್ನೋ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.