ತಮಿಳುನಾಡು ಸಂಸದ ಗಣೇಶಮೂರ್ತಿ ಅವರು ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇವರು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಡಿಎಂಕೆ ಸಂಸದ ಗಣೇಶಮೂರ್ತಿ ನಿಧನರಾಗಿದ್ದಾರೆ.
ಸಂಸದರು ಕೀಟನಾಶಕವಾದ ಸಲ್ಫೇಟ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಗೊತ್ತಾದ ಕೂಡಲೇ ಅವರ ಕುಟುಂಬದವರು ಈರೋಡ್‌ನ ಆಸ್ಪತ್ರೆಗೆ ಕರೆದೊಯ್ದರು. ನಂತರ ಅವರನ್ನು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಅಂದಿನಿಂದ ಅವರು ಎಕ್ಸ್‌ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್ ಬೆಂಬಲದೊಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅವರ ದೇಹ ಚಿಕಿತ್ಸೆಗೆ ಸ್ಪಂದಿಸದೆ ಇಂದು (ಗುರುವಾರ) ಬೆಳಗ್ಗೆ 5.05ರ ಸುಮಾರಿಗೆ ನಿಧನರಾಗಿರುವ ವರದಿಯಾಗಿದೆ. ಪಾರ್ಥಿವ ಶರೀರವನ್ನು ಈರೋಡ್‌ನ ಪೆರಿಯಾರ್ ನಗರದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ದು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.