Monday, July 15, 2024
Homeಕಾರ್ಕಳಬೀದಿ ನಾಯಿಗಳ ಕಾಟಕ್ಕೆ ಕಡಿವಾಣ ಹಾಕಲು ಪಣ ತೊಟ್ಟ ಕಾರ್ಕಳ ಪುರಸಭೆ

ಬೀದಿ ನಾಯಿಗಳ ಕಾಟಕ್ಕೆ ಕಡಿವಾಣ ಹಾಕಲು ಪಣ ತೊಟ್ಟ ಕಾರ್ಕಳ ಪುರಸಭೆ


ಕಾರ್ಕಳ : ಕಳೆದ ಕೆಲವಾರು ವರುಷಗಳಿಂದ ಬೀದಿ ನಾಯಿಗಳ ಉಪಟಳಕ್ಕೆ ಬೇಸತ್ತು ಹಲವಾರು ಮಂದಿ ಬೀದಿ ನಾಯಿಗಳ ಕಡಿತದಿಂದ ಸಾಕಷ್ಟು ಕಷ್ಟ ಅನುಭವಿಸಿ ಪುರಸಭೆಗೆ ಹಿಡಿಶಾಪ ಹಾಕುತಿದ್ದ ಸಾರ್ವಜನಿಕರು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟು ರಸ್ತೆಯಲ್ಲಿ ರಾಜರೋಷದಿಂದ ನಡೆದಾಡುವಂತಾಗಿದೆ.
ಕಾರ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಹಲವಾರು ಬಾರಿ ಬೀದಿ ನಾಯಿಗಳ ಕಡಿತದಿಂದ ಸಾರ್ವಜನಿಕರಿಗೆ ಆದ ಸಮಸ್ಯೆ ಬಗ್ಗೆ ಚರ್ಚೆಗೆ ಹಾಗೂ ಪ್ರತಿಪಕ್ಷ, ಆಡಳಿತ ಪಕ್ಷದ ಪ್ರಶ್ನೆ ಮತ್ತು ಟೀಕೆಗಳಿಗೆ ಗುರಿಯಾಗಿದ್ದ ಅಧಿಕಾರಿಗಳು ಹಲವಾರು ಬಾರಿ ಬೀದಿನಾಯಿಗಳ ಕಾಟ ತಪ್ಪಿಸಲು ಮಾಡಿದ ಹೋರಾಟ, ಪ್ರಯತ್ನ ಪ್ರಾಣಿ ಪ್ರೇಮಿಗಳು ಹಾಗೂ ಕಾನೂನಿನ ತೊಡಕಿನಿಂದ ಪುರಸಭೆಗೆ ಹಿನ್ನಡೆಯಾಗಿತ್ತು ಬೀದಿ ನಾಯಿಗಳಿಂದ ತೊಂದರೆ ಅನುಭವಿಸಿದ ಕುಟುಂಬಗಳ ನೋವು ಹಾಗೂ ಸಾರ್ವಜನಿಕರ ಆಕ್ರೋಶ ಪುರಸಭೆ ಅಧಿಕಾರಿಗಳ ನೆಮ್ಮದಿ ಕೆಡಿಸಿದ್ದಂತು ನಿಜ. ಹಲವಾರು ಸಮಸ್ಯೆಗಳು ಎದುರಾದರೂ ಕಾನೂನಿನ ತೊಡಕನ್ನು ವಿಕ್ರಮಾದಿತ್ಯನನ್ನು ಬೆಂಬಿಡದ ಬೆತಾಳನಂತೆ ಬೆನ್ನಟ್ಟಿ ಕಾನೂನಿನ ಚೌಕಟ್ಟಿನಲ್ಲಿ ಬೀದಿ ನಾಯಿಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮಹತ್ತರವಾದ ಹೆಜ್ಜೆಯನ್ನು ಇಟ್ಟಿದೆ.
ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ರೂಪ ಟಿ ಶೆಟ್ಟಿ ಹಾಗೂ ಹಿರಿಯ ಆರೋಗ್ಯ ಅಧಿಕಾರಿ ಲೈಲಾ ಥಾಮಸ್ ಅವರ ನೇತೃತ್ವದಲ್ಲಿ ಕಾರ್ಕಳ ಪುರಸಭೆ ಆಶ್ರಯದಲ್ಲಿ ಕ್ಯಾಪ್ಟನ್ ಅನಿಮಲ್ ಕೇರ್ ಟ್ರಸ್ಟ್ ಮಣಿಪಾಲ ಇದರ ಸಹಯೋಗದೊಂದಿಗೆ ಕಾರ್ಕಳ ನಗರ ವ್ಯಾಪ್ತಿಯ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಹಾಗೂ ರೇಬಿಸ್ ರೋಗ ನಿರೋಧಕ ಲಸಿಕೆಗಳನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಕಾರ್ಯಪ್ರವೃತ್ತವಾಗಿದೆ.
ಕಾರ್ಕಳ ಪುರಸಭಾ ವ್ಯಾಪ್ತಿಯ ಕರಿಯಕಲ್ಲು ಡಂಪಿಂಗ್ ಯಾರ್ಡ್ ಪಕ್ಕದಲ್ಲಿ ಶ್ವಾನಗಳ ಶಸ್ತ್ರಚಿಕಿತ್ಸೆಗಾಗಿ ಪ್ರತ್ಯೇಕ ಶಸ್ತ್ರಚಿಕಿತ್ಸಾ ಕೊಠಡಿ, ಶಸ್ತ್ರಚಿಕಿತ್ಸಾ ಪೂರ್ವ ಕೊಠಡಿ , ಶ್ವಾನಗಳ ಶಸ್ತ್ರಚಿಕಿತ್ಸಾ ನಂತರದ ವಿಶ್ರಾಂತಿ ಕೊಠಡಿ ನಿರ್ಮಿಸಿ , ನುರಿತ ಪಶುವೈದ್ಯರುಗಳಿಂದ ಬೀದಿ ನಾಯಿಗಳ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯಕೀಯ ಆರೋಗ್ಯ ನಡೆಸಿ ಮರಳಿ ತಂದಂತಹ ಜಾಗಗಳಿಗೆ ಬಿಡಲಾಗುತ್ತಿದೆ.
ಈಗಾಗಲೇ ಸುಮಾರು 80ರಷ್ಟು ಬೀದಿ ನಾಯಿಗಳನ್ನು ಶಸ್ತ್ರಚಿಕಿತ್ಸೆ ನಡೆಸಿ ಹೊರ ಬಿಡಲಾಗಿದ್ದು ದಿನವೊಂದಕ್ಕೆ ಸುಮಾರು 20ರಿಂದ 30ರಷ್ಟು ಬೀದಿ ನಾಯಿಗಳ ಶಸ್ತ್ರಚಿಕಿತ್ಸೆ ನಡೆಸಿ 3 ದಿನಗಳ ಶುಶ್ರೂಷೆ ನೀಡಿ ಅವುಗಳ ಚಲನ ವಲನಗಳ ಬಗ್ಗೆ ನಿಗಾ ಇಡಲಾಗುತ್ತಿದೆ.
ಕ್ಯಾಪ್ಟನ್ ಅನಿಮಲ್ ಕೇರ್ ಟ್ರಸ್ಟ್ ನ ಪಶು ವೈದ್ಯರು , ಪುರಸಭಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಹಕಾರದಿಂದ ಕಾರ್ಕಳ ಪುರಸಭಾ ವ್ಯಾಪ್ತಿಯ 23 ವಾರ್ಡ್ ಗಳಲ್ಲಿ ಬೆಳಗ್ಗಿನ ಜಾವ ಪುರಸಭಾ ವಾಹನಗಳಲ್ಲಿ ಬೀದಿ ನಾಯಿಗಳನ್ನು ಬಲೆ ಬೀಸಿ ಹಿಡಿದು ಹಾಕಿ ಕರಿಯಕಲ್ಲು ಡಂಪಿಂಗ್ ಯಾರ್ಡ್ ಪಕ್ಕದಲ್ಲಿರುವ ಪುರಸಭಾ ಶ್ವಾನ ಸಂತಾನ ಹರಣ ಶಸ್ತ್ರಚಿಕಿತ್ಸೆ ಕೇಂದ್ರಕ್ಕೆ ತಂದು ಗಂಡು ಹಾಗೂ ಹೆಣ್ಣು ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸುವುದರ ಜೊತೆಗೆ ರೇಬಿಸ್ ಲಸಿಕೆ ಹಾಕಲಾಗುತ್ತಿದೆ.
ಕಳೆದ ಒಂದು ವಾರದಿಂದ ವಿವಿಧ ವಾರ್ಡ್ಗ ಳಿಂದ ಸುಮಾರು ನೂರರಷ್ಟು ಬೀದಿ ನಾಯಿಗಳನ್ನು ಹಿಡಿದು ತಂದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ವಾರ್ಡುಗಳಲ್ಲಿ ಮುಂಚಿತವಾಗಿಯೇ ಸಾರ್ವಜನಿಕರಿಗೆ ಪುರಸಭೆ ಮಾಹಿತಿ ನೀಡಿ ಸಾಕು ನಾಯಿಗಳನ್ನು ಬೀದಿಗೆ ಬಿಡದಂತೆ ವಿನಂತಿಸಲಾಗುತ್ತದೆ. ಹಿಡಿದ ಬೀದಿ ನಾಯಿಗಳ ಮಾಹಿತಿ ಸಂಖ್ಯೆಗಳನ್ನು ಸ್ಥಳದಲ್ಲೇ ಸಾರ್ವಜನಿಕರಿಗೆ ಆಯಾ ದಿನ ನೀಡುವ ಕೆಲಸ ಕೂಡ ಪುರಸಭೆಯ ಹಿರಿಯ ಆರೋಗ್ಯಾಧಿಕಾರಿ ಲೈಲಾ ಥಾಮಸ್ ಮಾಡುತ್ತಿದ್ದಾರೆ.

ನಿರಂತರವಾಗಿ ಸುಮಾರು ಒಂದು ತಿಂಗಳ ಕಾಲ ಈ ಪ್ರಕ್ರಿಯೆ ನಡೆಯಲಿಕ್ಕಿದ್ದು ಸುಮಾರು 300 ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಸುವ ಗುರಿ ಪುರಸಭೆ ಹೊಂದಿದೆ.
ನಾಯಿಯನ್ನು ಹಿಡಿದು ತಂದು ಅವುಗಳ ಆರೈಕೆ, ಶಸ್ತ್ರಚಿಕಿತ್ಸೆ, ಲಸಿಕೆ, ಶಸ್ತ್ರಚಿಕಿತ್ಸೆ ನಂತರ ಮೂರು ದಿನದ ಆರೈಕೆ ಹಾಗೂ ನಾಯಿಗಳನ್ನು ಪುನ ತಮ್ಮ ತಮ್ಮ ಸ್ವಸ್ಥಾನಕ್ಕೆ ಬಿಟ್ಟು ಬಿಡಲು ಪುರಸಭೆ ಪ್ರತಿಯೊಂದು ನಾಯಿಗಳ ಮೇಲೆ 1650 ರೂಪಾಯಿಗಳನ್ನು ವ್ಯಯಿಸುತ್ತಿದ್ದು ಕ್ಯಾಪ್ಟನ್ ಅನಿಮಲ್ ಕೇರ್ ಟ್ರಸ್ಟ್ ಟೆಂಡರ್ ಪಡೆದು ಕೊಂಡು ಪಶು ವೈದ್ಯ ಡಾ. ವಿಜಯ್ ಹಾಗೂ ಅವರ ತಂಡ ಶಸ್ತ್ರಚಿಕಿತ್ಸೆಯ ಜವಬ್ದಾರಿ ವಹಿಸಿಕೊಂಡು ಕಾರ್ಕಳ ತಾಲೂಕು ಪಶು ವೈದ್ಯಾಧಿಕಾರಿ ಡಾ. ವಾಸುದೇವ್ ಪೈಯವರ ಮೇಲುಸ್ತುವಾರಿ ಹಾಗೂ ಮಾರ್ಗದರ್ಶನ ನೀಡುತ್ತಿದ್ದಾರೆ.
ಪ್ರತಿ ವರ್ಷ ಕೂಡ ಇದೇ ರೀತಿ ಪುರಸಭೆ ಕ್ರಮ ಕೈಗೊಂಡು ಬೀದಿ ನಾಯಿಗಳನ್ನು ಸಂಹರಿಸದೆ ಬೀದಿನಾಯಿಗಳ ಸಂಖ್ಯೆ ಹಾಗೂ ಉಪಟಳ ಕಡಿಮೆಗೊಳಿಸುವಲ್ಲಿ ಮಹತ್ತರವಾದ ಪಾತ್ರ ವಹಿಸಲಿದೆ.

ರೂಪ ಟಿ ಶೆಟ್ಟಿ
ಮುಖ್ಯಾಧಿಕಾರಿ

RELATED ARTICLES
- Advertisment -
Google search engine

Most Popular