ಉತ್ತರ ಪ್ರದೇಶದ : ಝಾನ್ಸಿ ಜಿಲ್ಲೆಯಲ್ಲಿ ನಡೆದಿದ್ದ ಮಹಿಳೆಯ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ತಿರುವು ಲಭಿಸಿದೆ. ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವವನ್ನು ಪ್ರಾರಂಭದಲ್ಲಿ ಎಲ್ಲರೂ ಆತ್ಮಹತ್ಯೆಯೆಂದೇ ನಂಬಿದ್ದರು.
ಆದರೆ ಆ ದಂಪತಿಯ ಸಣ್ಣ ಮಗು ತನಗೆ ತೋಚಿದ ರೀತಿಯಲ್ಲಿ ಚಿತ್ರವೊಂದನ್ನು ಬಿಡಿಸಿ, ಅದರಲ್ಲಿ ತನ್ನ ತಾಯಿಯನ್ನು ತನ್ನ ತಂದೆಯೇ ಹಿಂಸಿಸಿ, ಸಾಯಿಸಿರುವುದಾಗಿ ಮಗು ನೀಡಿದ ಸುಳಿವು ಇದೀಗ ಈ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ನೀಡಿದೆ. ಮುಗ್ಧ ಮಗು ಬಿಡಿಸಿದ ಚಿತ್ರದ ಆಧಾರದಲ್ಲಿ ಇದನ್ನು ಕೊಲೆ ಪ್ರಕರಣವೆಂದು ಪರಿಗಣಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಝಾನ್ಸಿಯ ಕೋಟ್ವಾಲಿ ಪ್ರದೇಶದ ಪಂಚವಟಿ ಎಂಬಲ್ಲಿನ ಶಿವ ಪರಿವಾರ ಕಾಲನಿಯಲ್ಲಿ ಈ ಘಟನೆ ನಡೆದಿತ್ತು. ಇಲ್ಲಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆಕೆಯ ಗಂಡನ ಸೋದರ ಸಂಬಂಧಿಗಳು ಮಹಿಳೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಆದರೆ, ಈ ಮಹಿಳೆಯ ಪುಟ್ಟ ಮಗುವಿನ ಒಂದು ಡ್ರಾಯಿಂಗ್ ಹಾಗೂ ಆಕೆ ನೀಡಿದ ಹೇಳಿಕೆಯಿಂದ, ಈ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿಲ್ಲ, ಬದಲಾಗಿ ಈಕೆಯನ್ನು ಈಕೆಯ ಪತಿಯೇ ಸಾಯಿಸಿ ಬಳಿಕ ನೇಣು ಹಾಕಿಕೊಂಡಂತೆ
ಸೀನ್ ಕ್ರಿಯೇಟ್ ಮಾಡಿದ್ದ ಎಂಬ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.
ಪತಿಯ ಹಿಂಸೆಗೆ ಪ್ರಾಣಬಿಟ್ಟ ನತದೃಷ್ಟ ಮಹಿಳೆಯನ್ನು ಸೋನಾಲಿ ಬುಢೋಲಿಯಾ ಎಂದು ಗುರುತಿಸಲಾಗಿದೆ. ಮತ್ತು ಈಕೆಯ ಪತಿಯನ್ನು ಸಂದೀಪ್ ಬುಢೋಲಿಯಾ ಎಂದು ಗುರುತಿಸಲಾಗಿದ್ದು, ಈತ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದ. ಮತ್ತು ಈ ಸಾವಿನ ರಹಸ್ಯವನ್ನು ಬಯಲಿಗೆಳೆದ ಇವರಿಬ್ಬರ ಮಗುವನ್ನು ದರ್ಶಿತಾ ಎಂದು ಗುರುತಿಸಲಾಗಿದೆ.
‘ಪಾಪಾ ಅಮ್ಮನ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದ್ದಾರೆ. ‘ನಿನಗೆ ಸಾಯಲು ಇಷ್ಟವಿದ್ದರೆ ಸತ್ತು ಹೋಗು’ ಎಂದು ಅವರು ಅಮ್ಮನಿಗೆ ಹೇಳಿದರು. ಬಳಿಕ ಪಾಪಾ ಅಮ್ಮನ ದೇಹವನ್ನು ನೇತು ಹಾಕಿ ಆಕೆಯ ತಲೆಗೆ ಕಲ್ಲಿನಿಂದ ಹೊಡೆದಿದ್ದಾರೆ. ಬಳಿಕ, ಅವರು ಅಮ್ಮನ ದೇಹವನ್ನು ಕೆಳಗಿಳಿಸಿ ಅದನ್ನು ದೊಡ್ಡ ಪ್ಲಾಸ್ಟಿಕ್ ಗೋಣಿಯೊಂದರಲ್ಲಿ ಮುಚ್ಚಿಟ್ಟಿದ್ದಾರೆ’ ಎಂದು ದರ್ಶಿತಾ ತಾನು ಕಂಡ ಈ ಭೀಕರ ಘಟನೆಯನ್ನು ತನ್ನದೇ ರೀತಿಯಲ್ಲಿ ಡ್ರಾಯಿಂಗ್ ಮೂಲಕ ಚಿತ್ರಿಸಿ, ಈ ಶಾಕಿಂಗ್ ಮಾಹಿತಿಯನ್ನು ಬಿಚ್ಚಿಟ್ಟಿದ್ದಾಳೆ.
ತನ್ನ ಅಪ್ಪ, ಮೊದಲಿಗೆ ಅಮ್ಮನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂಬುದನ್ನೂ ಈ ಮಗು ಹೇಳಿಕೊಂಡಿದೆ. ‘ನನ್ನ ಅಮ್ಮನನ್ನು ನೀವು ಮುಟ್ಟಿದರೆ ನಿಮ್ಮ ಕೈ ಮುರಿಯುತ್ತೇನೆಂದು ನಾನೊಮ್ಮೆ ನನ್ನ ತಂದೆಗೆ ಹೇಳಿದ್ದೆ. ಅವರು ನನ್ನ ಅಮ್ಮನಿಗೆ ಹೊಡೆಯುತ್ತಿದ್ದರು, ಮತ್ತು ಆಕೆಯನ್ನು ಸಾಯುವಂತೆ ಹೇಳುತ್ತಿದ್ದರು’ ಎಂದು ಆ ಮಗು ಹೇಳಿಕೊಂಡಿದೆ. ಇವರಿಬ್ಬರು 2019ರಲ್ಲಿ ಮದುವೆಯಾಗಿದ್ದರು ಮತ್ತು ಮದುವೆಯಾದ ಸ್ವಲ್ಪ ದಿನದಿಂದಲೇ ಇವರಿಬ್ಬರ ವೈವಾಹಿಕ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು ಎಂದು ಸೊನಾಲಿಯ ತಂದೆ ಮಧ್ಯಪ್ರದೇಶದ ತಿಕಮ್ ಘರ್ ನಿವಾಸಿ ಸಂಜೀವ್ ತ್ರಿಪಾಠಿ ಹೇಳಿದ್ದಾರೆ.
‘ಮದುವೆಯ ದಿನ ನಾನು 20 ಲಕ್ಷ ರೂಪಾಯಿಯನ್ನು ವರ ದಕ್ಷಿಣೆ ರೂಪದಲ್ಲಿ ನಿಡಿದ್ದೆ. ಆದರೆ ಆ ಬಳಿಕ ಸಂದೀಪ್ ಮತ್ತು ಆತನ ಕುಟುಂಬಸ್ಥರು ಹೊಸ ಬೇಡಿಕೆಗಳನ್ನು ಇಡಲಾರಂಭಿಸಿದರು. ಅವರು ಕಾರೊಂದನ್ನು ಕೇಳಿದರು. ಆದರೆ ನನಗೆ ಅದು ಸಾಧ್ಯವಿಲ್ಲ ಎಂದು ಹೇಳಿದೆ. ಆ ಬಳಕ ಅವರೆಲ್ಲರೂ ಸೇರಿಕೊಂಡು ನನ್ನ ಮಗಳಿಗೆ ಪ್ರತೀದಿನ ಹಿಂಸೆ ನೀಡಲಾರಂಭಿಸಿದರು. ಈ ವಿಚಾರದಲ್ಲಿ ನಾನು ಪೊಲೀಸರಿಗೂ ದೂರು ನೀಡಿದ್ದೆ, ಅಲ್ಲಿ ಎರಡೂ ಕಡೆಯವರ ನಡುವೆ ಮಾತುಕತೆ ನಡೆದು ಪ್ರಕರಣ ಕೈಬಿಡಲಾಗಿತ್ತು’ ಎಂದು ತ್ರಿಪಾಠಿ ಹೇಳಿಕೊಂಡಿದ್ದಾರೆ.
ಆದರೆ ಈ ದಂಪತಿಗೆ ಮಗು ಹುಟ್ಟಿದ ಮೇಲೆ ಇವರಿಬ್ಬರ ನಡುವೆ ಮನಸ್ತಾಪ ಇನ್ನಷ್ಟು ಬೆಳೆಯಿತು. ಸಂದೀಪ್ ಗಂಡು ಮಗುವನ್ನು ಬಯಸಿದ್ದ. ಅವರು ಸೋನಾಲಿ ಮತ್ತು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದರು, ಬಳಿಕ ನಾನೇ ಬಿಲ್ ಪಾವತಿಸಿ ಅವರನ್ನು ನನ್ನ ಮನೆಗೆ ಕರೆದಕೊಂಡು ಬಂದಿದ್ದೆ ಎಂದು ತ್ರಿಪಾಠಿ ಹೇಳಿಕೊಂಡಿದ್ದಾರೆ. ಇದೀಗ ನತದೃಷ್ಟ ಮಹಿಳೆಯ ಮೃತೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಕೊಟ್ವಾಲಿ ನಗರ ಪೊಲೀಸ್ ಅಧಿಕಾರಿ ರಾಮ್ ವೀರ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.