ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಮಂಡಿಸಿದ ಬಜೆಟ್ ಸಂವಿಧಾನ ವಿರೋಧಿ ಬಜೆಟ್ ಆಗಿದೆ. ಜಾತ್ಯಾತೀತ ಹೆಸರು ಹೇಳಿಕೊಂಡು ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಹಚ್ಚುವ ವೋಟ್ ಬ್ಯಾಂಕ್ ಬಜೆಟ್ ಮಂಡಿಸಿ ಸಮಾಜ ಒಡೆಯುವ ಕೆಲಸಕ್ಕೆ ನಾಂದಿ ಹಾಡಿದ್ದಾರೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಟೀಕಿಸಿದೆ.
ಒಂದೆಡೆ 1,16,170 ಕೋಟಿ ರೂಪಾಯಿ ಸಾಲ ತಂದು ಉಚಿತ ಹಂಚುವುದು. ಇನ್ನೊಂದೆಡೆ ಅದೇ ಸಾಲದಲ್ಲಿ 4,700 ಕೋಟಿ ರೂಪಾಯಿಯನ್ನು ಅಲ್ಪಸಂಖ್ಯಾತರ ಹೆಸರಲ್ಲಿ ಮುಸ್ಲಿಮರಿಗೆ ಹಂಚುವುದು ಈ ಬಜೆಟ್ ನ ತಂತ್ರವಾಗಿದೆ. ಎಲ್ಲಡೆ ಅಭಿವೃದ್ಧಿಗೆ ದೊಡ್ಡ ಹೊಡೆತ ಬೀಳಲಿದೆ. ಈಗಾಗಲೇ ಅತೀ ಹೆಚ್ಚು ಸಾಲ ಮಾಡಿರುವ ಮುಖ್ಯಮಂತ್ರಿ ಎಂಬ ಹಣೆಪಟ್ಟಿಯನ್ನು ಹೊಂದಿರುವ ಸಿದ್ದರಾಮಯ್ಯನವರು ಒಟ್ಟಾರೆ 16,000 ಕೋಟಿ ರೂಪಾಯಿ ಕೊರತೆಯ ಅಭಿವೃದ್ಧಿ ಶೂನ್ಯ ವೋಟ್ ಬ್ಯಾಂಕ್ ಬಜೆಟ್ ಮಂಡಿಸಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೀಡುಮಾಡಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.