ಚಿಕ್ಕಬಳ್ಳಾಪುರ: ಯೋಗ ಶಿಕ್ಷಕಿಯನ್ನು ಅರೆಬೆತ್ತಲೆಗೊಳಿಸಿ ಜೀವಂತ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಡಿಟೆಕ್ಟಿವ್ ಏಜೆನ್ಸಿ ಮಾಲೀಕ ಸತೀಶ್‌ರೆಡ್ಡಿ, ರಮಣ, ಸಲ್ಮಾನ್, ರವಿ ಎಂಬುವವರನ್ನು ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಅಪಹರಣಕ್ಕೊಳಗಾಗಿದ್ದ ಯೋಗ ಶಿಕ್ಷಕಿ ಮೂಲತಃ ದೇವನಹಳ್ಳಿ ತಾಲೂಕಿನವರು. ಮದುವೆಯಾಗಿ ಪತಿಯಿಂದ ಪ್ರತ್ಯೇಕವಾಗಿ ವಾಸವಿದ್ದರು. ಶಿಕ್ಷಕಿ ಬಳಿ ಸತೀಶ್‌ರೆಡ್ಡಿ ಯೋಗ ಕಲಿಯುವುದಕ್ಕೆ ಹೋಗುತ್ತಿದ್ದ. ನಂತರ ಗನ್ ತರಬೇತಿ ನೀಡುವುದಾಗಿ ಮನೆಗೆ ಬಂದಿದ್ದ. ಸತೀಶ್‌ರೆಡ್ಡಿ ಮಾಜಿ ಸೈನಿಕ ಎನ್ನಲಾಗಿದೆ. ಕೊಪ್ಪಳದಲ್ಲಿ ಕಾರು ಕದ್ದು ಕಿಡ್ನ್ಯಾಪ್ಗೆ ಬಳಸಲಾಗಿತ್ತು.
ಯೋಗ ಶಿಕ್ಷಕಿಯ ಕೊಲೆಗೆ ಆಕೆಯ ಪ್ರಿಯಕರ ಸಂತೋಷ್ಕುಮಾರ್ ಪತ್ನಿ ಸುಪಾರಿ ನೀಡಿದ್ದ ಆರೋಪ ಕೇಳಿಬಂದಿದೆ. ಸುಪಾರಿ ಪಡೆದಿದ್ದ ಸತೀಶ್‌ರೆಡ್ಡಿ & ಗ್ಯಾಂಗ್ನಿಂದ ಅ.23ರಂದು ಡಿಎಸ್ ಮ್ಯಾಕ್ಸ್ ಸನ್ವರ್ತ್ ಅಪಾರ್ಟ್ಮೆಂಟ್ನಿಂದ ಯೋಗ ಶಿಕ್ಷಕಿಯನ್ನು ಕಿಡ್ನ್ಯಾಪ್ ಮಾಡಲಾಗಿದೆ.
ಸತ್ತಂತೆ ನಟಿಸಿ ಗುಂಡಿಯಿಂದ ಎದ್ದು ಬಂದ ಯೋಗ ಶಿಕ್ಷಕಿ
ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಆದರೆ ಶಿಕ್ಷಕಿ ಒಪ್ಪದಿದ್ದಾಗ ಸ್ನೇಹಿತರ ಕರೆಸಿ ಕತ್ತು ಹಿಸುಕಿ ಕೊಲೆಗೆ ಯತ್ನಿಸಲಾಗಿದೆ. ಶಿಕ್ಷಕಿ ಸತ್ತು ಹೋಗಿದ್ದಾಳೆಂದು ಭಾವಿಸಿ ಗುಂಡಿ ತೋಡಿ ಆಕೆಯ ಮೇಲೆ ಮರದ ಕೊಂಬೆಗಳನ್ನು ಹಾಕಿ ಹೋಗಿದ್ದರು. ಅದುವರೆಗೂ ಸತ್ತಂತೆ ನಟಿಸಿ, ದುಷ್ಕರ್ಮಿಗಳು ಹೋದ ಬಳಿಕ ಗುಂಡಿಯಿಂದ ಎದ್ದು ಹೊರಬಂದಿದ್ದರು.
ಬಳಿಕ ಸ್ಥಳೀಯರಿಂದ ಬಟ್ಟೆ ಪಡೆದು ದಿಬ್ಬೂರಹಳ್ಳಿ ಠಾಣೆಗೆ ಆಗಮಿಸಿದ್ದಾರೆ. ಕೊಲೆಗೆ ಯತ್ನ, ಅಪಹರಣ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ದೂರು ನೀಡಿದ್ದಾರೆ. ಮಹಿಳೆ ದೂರು ಆಧರಿಸಿ ಆರೋಪಿಗಳ ಪತ್ತೆಗೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ ಬಳಿಕ ವಿಶೇಷ ತನಿಖಾ ತಂಡ ರಚಿಸಿ ಸದ್ಯ ಆರೋಪಿಗಳನ್ನು ಬಂಧಿಸಿದ್ದಾರೆ.