ನವದೆಹಲಿ : ಕೆಲವೇ ವಾರಗಳ ಹಿಂದೆ ಪತ್ತೆಯಾಗಿದ್ದ ವಿಶ್ವದ ಅತೀದೊಡ್ಡ ಹಾಗೂ ಅತ್ಯಂತ ತೂಕದ ಹಾವು ಬ್ರೆಜಿಲ್‌ನ ಅಮೇಜಾನ್ ಮಳೆಕಾಡಿನಲ್ಲಿ ಸಾವು ಕಂಡಿದೆ ಎಂದು ವರದಿಯಾಗಿದೆ. ವಿಲ್ ಸ್ಮಿತ್ ಅವರೊಂದಿಗೆ ನ್ಯಾಷನಲ್ ಜಿಯಾಗ್ರಫಿಕ್‌ನ ಡಿಸ್ನಿ+ ಸರಣಿಯ ಪೋಲ್ ಟು ಪೋಲ್‌ನ ಚಿತ್ರೀಕರಣದ ಸಮಯದಲ್ಲಿ ವಿಜ್ಞಾನಿಗಳ ತಂಡವು ಅಮೆಜಾನ್‌ನಲ್ಲಿ ಈ ಹಿಂದೆಂದೂ ಕಾಣಸಿಗದ ಹಾಗೂ ದಾಖಲೆಯಲ್ಲಿ ಇಲ್ಲದ ದೈತ್ಯ ಜಾತಿಯ ಅನಕೊಂಡವನ್ನು ಕಂಡುಹಿಡಿದಿತ್ತು. ಈ ದೈತ್ಯ ಹಾವಿಗೆ ಅನಾ ಜೂಲಿಯಾ ಎಂದು ಹೆಸರನ್ನು ಇಡಲಾಗಿತ್ತು. ಐದು ವಾರಗಳ ಹಿಂದೆ ದಕ್ಷಿಣ ಬ್ರೆಜಿಲ್‌ನ ಮಾಟೊ ಗ್ರೊಸೊ ಡೊ ಸುಲ್ ರಾಜ್ಯದ ಬೊನಿಟೊದ ಗ್ರಾಮೀಣ ಪ್ರದೇಶದ ಫಾರ್ಮೊಸೊ ನದಿಯಲ್ಲಿ ಈ ಹಾವನ್ನು ಪತ್ತೆ ಮಾಡಲಾಗಿತ್ತು. ಬರೋಬ್ಬರಿ 26 ಅಡಿ ಉದ್ದವಿದ್ದ ನಾರ್ಥರ್ನ್ ಗ್ರೀನ್ ಅನಕೊಂಡಾ ಬರೋಬ್ಬರಿ 200 ಕೆಜಿ ತೂಕವಿತ್ತು ಎಂದು ಅಂದಾಜಿಸಲಾಗಿದೆ. ಇನ್ನು ಈ ಹಾವಿನ ಮುಖ ಹೆಚ್ಚೂ ಕಡಿಮೆ ಮನುಷ್ಯನ ಮುಖದಷ್ಟು ದೊಡ್ಡದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದರು.
ಈ ಹಾವಿಗೆ ಗುಂಡು ಹಾರಿಸಿರಬಹುದು ಎಂದು ವರದಿಗಳು ಬಂದಿವೆ. ಆದರೆ ಅನಾ ಜೂಲಿಯಾವನ್ನು ಕಂಡುಹಿಡಿಯಲು ಸಹಾಯ ಮಾಡಿದ ಡಚ್ ಸಂಶೋಧಕರು ಸಾವಿನ ಕಾರಣವನ್ನು ಇನ್ನೂ ತನಿಖೆ ಮಾಡಲಾಗುತ್ತಿದೆ ಎಂದು ಒತ್ತಿ ಹೇಳಿದರು. ಪ್ರೊಫೆಸರ್ ಫ್ರೀಕ್ ವೊಂಕ್ ಅವರು ಈ ಸುದ್ದಿಯನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಹಸಿರು ಅನಕೊಂಡ ಕೊನೆಯುಸಿರೆಳೆದಿದೆ. ಕಬ್ಬಿಣದಂತೆ ಗಟ್ಟಿಮುಟ್ಟಾಗಿದ್ದ, ದಶಕದಿಂದಲೂ ಬೆನೆಟೋ ಸುತ್ತಮುತ್ತ ಓಡಾಡಿಕೊಂಡಿದ್ದ ಹಾವು ಸತ್ತಿದೆ ಎಂದು ಹೇಳಲು ಹೃದಯ ಭಾರವಾಗುತ್ತಿದೆ,’ ಎಂದಿದ್ದಾರೆ. ನನಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಆಕೆ ಸಂಪೂರ್ಣ ಆರೋಗ್ಯವಾಗಿದ್ದಳು ಮತ್ತು ತನ್ನ ಜೀವಿತಾವಧಿಯ ಪ್ರಮುಖ ಘಟದ್ದಲ್ಲಿದ್ದಳು. ಮುಂಬರುವ ವರ್ಷಗಳಲ್ಲಿ ಅವಳು ಅನೇಕ ವಂಶಸ್ಥರನ್ನು ನೋಡಿಕೊಳ್ಳಬಹುದಿತ್ತು. ಈ ಜಾತಿಯ ಬೃಹತ್ ದೈತ್ಯ ಹಾವುಗಳು ಸುತ್ತಲೂ ಈಜುತ್ತಿರುವ ಕಾರಣ, ಜೀವವೈವಿಧ್ಯಕ್ಕೆ (ಮತ್ತು ನಿರ್ದಿಷ್ಟವಾಗಿ ಈ ನಿರ್ದಿಷ್ಟ ಜಾತಿಯ) ಆಗಿರುವ ಪರಿಣಾಮವೂ ದೊಡ್ಡದಾಗಿದೆ, ” ಎಂದು ತಿಳಿಸಿದ್ದಾರೆ. ಈ ಹಾವಿಗೆ ಗುಂಡು ಹಾರಿಸಲಾಗಿದೆ ಎನ್ನುವ ವರದಿಗಳನ್ನು ಕೇಳಿದ್ದೇನೆ.
ಆದರೆ, ಅಧಿಕಾರಿಗಳು ಇನ್ನೂ ಈ ಬಗ್ಗೆ ಖಚಿತವಾಗಿ ಹೇಳುವ ಯಾವುದೇ ಪುರಾವೆಗಳನ್ನು ಕಂಡುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ದೈತ್ಯ ಹಾವಿನ ಸಾವಿಗೆ ಕಾರಣವನ್ನೂ ಇನ್ನೂ ತನಿಖೆ ಮಾಡಲಾಗುತ್ತಿದೆ. ಎಲ್ಲಾ ರೀತಿಯಲ್ಲೂ ತನಿಖೆ ನಡೆಯಲಿದೆ. ಬಹುಶಃ ಆಕೆ ನೈಸರ್ಗಿಕವಾಗಿಯೇ ಸಾವು ಕಂಡಿರಬಹುದು ಎಂದು ತಿಳಿಸಿದ್ದಾರೆ. “ಈ ಪ್ರದೇಶದಲ್ಲಿ 7.5 ಮೀಟರ್‌ಗಿಂತಲೂ ಹೆಚ್ಚು ಉದ್ದ ಮತ್ತು ಸುಮಾರು 500 ಕಿಲೋಗ್ರಾಂಗಳಷ್ಟು ತೂಕವಿರುವ ಇತರ ಅನಕೊಂಡಗಳು ಕೂಡ ಇವೆ ಎಂದು ಈ ಪ್ರದೇಶದ ವಾಸಿಗಳಾ ವಯೋರಾನಿ ಜನರು ಹೇಳಿದ್ದಾರೆ. ಡೈವರ್ಸಿಟಿ ಜರ್ನಲ್‌ನಲ್ಲಿ ವಿವರಿಸಲಾದ ಹೊಸ ಜಾತಿಗಳು ಸುಮಾರು 10 ದಶಲಕ್ಷ ವರ್ಷಗಳ ಹಿಂದೆ ತಿಳಿದಿರುವ ದಕ್ಷಿಣ ಹಸಿರು ಅನಕೊಂಡದಿಂದ ಭಿನ್ನವಾಗಿವೆ, ತಳೀಯವಾಗಿ ಅದರಿಂದ 5.5 ಪ್ರತಿಶತದಷ್ಟು ಭಿನ್ನವಾಗಿವೆ.