ಭಯಂಕರ ಅಥವಾ ರೌದ್ರ ರೂಪದಲ್ಲಿ ಪೂಜಿಸಲಾಗುವ ಶಿವನ ಸ್ವರೂಪ ಕಾಲಭೈರವ ಅಥವಾ ಕಾಳಭೈರವ. ಇದೀಗ ಮಧ್ಯಪ್ರದೇಶದ ಜಬಲ್‌ಪುರದ ದೇವಸ್ಥಾನವೊಂದರಲ್ಲಿ ಯುವಕನೊಬ್ಬ ಭಗವಾನ್ ಕಾಲಭೈರವನ ಪ್ರತಿಮೆಯ ಬಾಯಿಗೆ ಸಿಗರೇಟ್ ಇಟ್ಟಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ಜಬಲ್ಪುರದ ಗ್ವಾರಿಘಾಟ್‌ನಲ್ಲಿರುವ ಶ್ರೀ ಕಾಲಭೈರವ ಮಂದಿರದಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಆರೋಪಿ ಯುವಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
@SumitKumar78276 ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ. ಯುವಕನ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ತನಿಖೆ ಆರಂಭಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಜಬಲ್‌ಪುರ ಆನಂದ ಕಲಾದಗಿ ಫ್ರೀ ಪ್ರೆಸ್‌ಗೆ ತಿಳಿಸಿದ್ದಾರೆ.
6 ಸೆಕೆಂಡುಗಳ ಕ್ಲಿಪ್‌ನಲ್ಲಿ, ಯಾವುದೇ ಭಕ್ತರು ದೇವರಿಗೆ ಸಿಗರೇಟ್ ಅರ್ಪಿಸಿದರೆ, ಅವರ ಇಷ್ಟಾರ್ಥಗಳು ಈಡೇರುತ್ತವೆ ಎಂದು ಯುವಕ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ವೈರಲ್ ಆದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಜಬಲ್‌ಪುರ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಕರಣವನ್ನು ಪರಿಹರಿಸಲು ವಿಶೇಷ ತಂಡವನ್ನು ರಚಿಸಿದ್ದಾರೆ.