ತುಮಕೂರು: ಸಮಾಜದಲ್ಲಿ ನಾವು ಎಂತೆಂತದ್ದೋ ಉದ್ಯೋಗಳಿಗೆ ಸಂಸ್ಥೆಗಳು, ಕಂಪನಿಗಳು ಸಿಬ್ಬಂದಿ ನೇಮಕ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ತುಮಕೂರಿನಲ್ಲಿ ಕಳ್ಳತನಕ್ಕೆಂದೇ ಸಂಬಳಕ್ಕೆ ಜನ ಇಟ್ಟುಕೊಂಡು ದಂಧೆ ನಡೆಸುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ಗೃಹ ಸಚಿವರ ತವರು ಕ್ಷೇತ್ರ ಕೊರಟಗೆರೆಯಲ್ಲಿ ರಾಘವೇಂದ್ರ ಎಂಬಾತ ವೆಂಕಟೇಶ್ ಎಂಬಾತನನ್ನು ಕಳ್ಳತನ ಮಾಡಲೆಂದೇ ನಿಯೋಜಿಸಿಕೊಂಡಿದ್ದಾನೆ. ಅದಕ್ಕಾಗಿ ತಿಂಗಳಿಗೆ 20,000 ರೂ. ವೇತನವನ್ನೂ ಫಿಕ್ಸ್ ಮಾಡಿದ್ದಾನೆ. 20,000 ರೂ. ಸಂಬಳ ಪಡೆಯುವ ವೆಂಕಟೇಶ್ ಕೊರಟಗೆರೆ ಸುತ್ತಮುತ್ತ ಬೋರ್ ವೆಲ್ ಗಳ ವೈರ್ ಗಳನ್ನು ಕದ್ದು ರಾಘವೇಂದ್ರನಿಗೆ ಕೊಡ್ತಿದ್ದ. ಅವುಗಳನ್ನು ರಾಘವೇಂದ್ರ ವಿನೇಶ್ ಪಟೇಲ್ ಎಂಬಾತನಿಗೆ ಮಾರಾಟ ಮಾಡುತ್ತಿದ್ದ.
ಕಳ್ಳತನ ಮಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾದುದರಿಂದ ಈ ಕಳ್ಳತನ ಜಾಲವನ್ನು ಪತ್ತೆಹಚ್ಚುವಲ್ಲಿ ಕೊರಟಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ. ವೆಂಕಟೇಶ್, ವಿನೇಶ್ ಪಟೇಲ್, ರಾಘವೇಂದ್ರನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ವಿಚಾರಣೆಯಲ್ಲಿ ಸಂಬಳ ಪಡೆದು ಕಳ್ಳತನ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.