ಬೆಂಗಳೂರು: ವಿವಾಹ ವಿಚ್ಛೇದನೆ ನೀಡದಿದ್ದರೆ ನಿನ್ನ ತಲೆಯನ್ನು ಕಡಿದು ಕುಕ್ಕರ್ ನಲ್ಲಿ ಬೇಯಿಸುತ್ತೇನೆ. ಮನೆಯ ಗ್ಯಾಸ್ ಸಿಲಿಂಡರ್ ಸ್ಫೋಟಿಸಿ ಸಾಯಿಸುತ್ತೇನೆ ಎಂದು ಪತಿ ಬೆದರಿಕೆಯೊಡ್ಡುತ್ತಿರುವುದಾಗಿ ಪತ್ನಿಯೊಬ್ಬರು ದೂರು ನೀಡಿದ್ದಾರೆ. ಅಲ್ಲದೆ ತಮ್ಮ ಖಾಸಗಿ ವಿಡಿಯೋ, ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಿಯೂ ಆತ ಬೆದರಿಕೆಯೊಡ್ಡಿದ್ದಾನೆ ಎನ್ನಲಾಗಿದೆ. ಹೆಣ್ಣೂರಿನ ನಿವಾಸಿ 43 ವರ್ಷದ ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಆಕೆಯ ಪತಿ 49 ವರ್ಷದ ರಘುಪತಿ ಮತ್ತು ಆತನ ಪ್ರೇಯಸಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆ ಹಾಗೂ ಆಕೆಯ ಪತಿ ರಘುಪತಿ ಖಾಸಗಿ ಕಂಪೆನಿ ಉದ್ಯೋಗಿಗಳಾಗಿದ್ದಾರೆ. ಆರಂಭದಲ್ಲಿ ಚೆನ್ನಾಗಿದ್ದ ಇವರ ಸಂಬಂಧ ಬಳಿಕ ಹದಗೆಟ್ಟಿದೆ. 2011ರಲ್ಲಿ ಸಂತ್ರಸ್ತೆ ಕೆಲಸದ ನಿಮಿತ್ತ ಲಂಡನ್ ಗೆ ತೆರಳಿದ್ದಾಗ ರಘುಪತಿ ದುಡ್ಡಿಗೆ ಬೇಡಿಕೆಯಿಟ್ಟಿದ್ದ ಮತ್ತು 2021ರಿಂದ ಅನೈತಿಕ ಸಂಬಂಧವನ್ನೂ ಹೊಂದಿರುವುದಾಗಿ ದೂರಿನಲ್ಲಿ ಆಪಾದಿಸಲಾಗಿದೆ.