ಬೆಂಗಳೂರು: ಹೆಂಡತಿ ಮೇಲಿನ ಕೋಪಕ್ಕೆ 20 ದಿನದ ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಪತಿಯನ್ನು ಪತ್ನಿಯ ಸಹೋದರರೇ ಹತ್ಯೆ ನಡೆಸಿರುವ ಘಟನೆ ಇಂದು ಬೆಳಗ್ಗೆ ಬೆಂಗಳೂರಿನ ಸಿದ್ದಾಪುರದಲ್ಲಿ ನಡೆದಿದೆ.
ಸಲ್ಮಾನ್ ಖಾನ್ (29) ಮೃತ ವ್ಯಕ್ತಿ. ಉಮರ್, ಶೊಯೇಬ್ ಹಾಗೂ ಅನ್ವರ್ ಕೊಲೆ ಆರೋಪಿಗಳಾಗಿದ್ದಾರೆ. ಮೃತ ಸಲ್ಮಾನ್ ಖಾನ್ ಸಿದ್ದಾಪುರದಲ್ಲಿ ವಾಸವಾಗಿದ್ದು, ಬೀರು ತಯಾರಿಕಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಗೃಹಿಣಿಯಾಗಿದ್ದು, ದಂಪತಿಗೆ 20 ದಿನದ ಮಗುವಿದೆ. ಸಲ್ಮಾನ್ ಖಾನ್ ಕುಡಿತದ ಚಟದಿಂದಾಗಿ ಕೆಲವು ತಿಂಗಳಿಂದ ಕೆಲಸಕ್ಕೆ ಹೋಗಿರಲಿಲ್ಲ. ಜೊತೆಗೆ ಕುಡಿದು ಬಂದು ಪ್ರತಿನಿತ್ಯ ಹೆಂಡತಿಯೊಂದಿಗೆ ಜಗಳವಾಡುತ್ತಿದ್ದ. ಈತನಿಗೆ ಹಲವು ಬಾರಿ ಬುದ್ಧಿ ಹೇಳಿದ್ದರೂ ಕೂಡ ಅದನ್ನೇ ಮುಂದುವರೆಸಿಕೊಂಡು ಬಂದಿದ್ದ. ಸೋಮವಾರ ರಾತ್ರಿ ಸಹ ಕುಡಿದ ನಶೆಯಲ್ಲಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳ ಮಾಡಿದ್ದ. ಈತನ ಕಾಟ ತಾಳಲಾರದೆ 112ಕ್ಕೆ ಕರೆ ಮಾಡಿ ಪೋಲೀಸರನ್ನ ಕರೆಯಿಸಿಕೊಳ್ಳುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದ.
ಇಂದು ಬೆಳಗಿನ ಜಾವ ಮನೆಗೆ ಬಂದು ಪೊಲೀಸರನ್ನ ಕರೆಯಿಸುತ್ತೀಯಾ ಎಂದು ಕ್ಯಾತೆ ತೆಗೆದು ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿದ್ದ. ಇದರಿಂದ ಆತಂಕಗೊಂಡ ಪತ್ನಿ ತನ್ನ ಸಹೋದರರನ್ನ ಸ್ಥಳಕ್ಕೆ ಕರೆಯಿಸಿಕೊಂಡಿದ್ದಳು. ಈ ವೇಳೆ ತನ್ನ 20 ದಿನದ ಮಗುವಿಗೆ ಚಾಕು ತೋರಿಸಿ ಕೊಲ್ಲುವುದಾಗಿ ಬೆದರಿಸಿದ್ದ. ಈ ವೇಳೆ ಆರೋಪಿಗಳು ಮರದ ರಿಪೀಸ್‌ನಿಂದ ಹೊಡೆದು ಮಗುವನ್ನು ಕಸಿದು, ಸಲ್ಮಾನ್ ಕೈಯಲ್ಲಿದ್ದ ಚಾಕು ಕಿತ್ತುಕೊಂಡು ಆತನಿಗೆ ತಿವಿದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಆತನನ್ನು ತಕ್ಷಣ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಈ ಘಟನೆ ಸಂಬಂಧ ಸಲ್ಮಾನ್ ಹೆಂಡತಿಯ ಮೂವರು ಸಹೋದರರನ್ನು ಬಂಧಿಸಲಾಗಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
20 ದಿನದ ಮಗುವನ್ನು ಕೊಲ್ಲುವ ಬೆದರಿಕೆ: ಪತ್ನಿಯ ಸಹೋದರರಿಂದಲೇ ಪತಿಯ ಹತ್ಯೆ
RELATED ARTICLES