ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗೆ ಬೆದರಿಕೆಯೊಡ್ಡಿದ ಬರಹಗಳನ್ನು ಮೆಟ್ರೋ ರೈಲುಗಳಲ್ಲಿ ಬರೆಯುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮೆಟ್ರೋ ರೈಲು ಕೋಚ್ ಗಳು ಮತ್ತು ಸೈನ್ ಬೋರ್ಡ್ ಗಳಲ್ಲಿ ಬಂಧಿತ ಯುವಕ ಗೀಚುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದವು. ಅಲ್ಲದೆ, ತನ್ನ ಗೀಚು ಬರಹಗಳ ಫೋಟೊಗಳನ್ನು ತನ್ನ ಇನ್ಸ್ ಟಾಗ್ರಾಂನಲ್ಲಿ ಬಂಧಿತ ಆರೋಪಿ ಹಂಚಿಕೊಂಡಿದ್ದ.
ಬಂಧಿತ ಆರೋಪಿಯನ್ನು 33 ವರ್ಷದ ಅಂಕಿತ್ ಗೋಯಲ್ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಎಫ್ ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು.