ಮಲ್ಪೆ: ಬೀಚ್ ನೋಡಲೆಂದು ಬಂದು ಈಜಲೆಂದು ಸಮುದ್ರಕ್ಕಿಳಿದ ಮೂವರು ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋಗಿದ್ದು, ಆ ಪೈಕಿ ಒಬ್ಬ ಸಾವನ್ನಪ್ಪಿ, ಇನ್ನಿಬ್ಬರನ್ನು ರಕ್ಷಿಸಲಾಗಿದೆ. ಮಲ್ಪೆ ಬೀಚ್ ನಲ್ಲಿ ಬುಧವಾರ ಈ ಘಟನೆ ಸಂಭವಿಸಿದೆ. ಹಾಸನ ಜಿಲ್ಲೆಯ ಬೇಲೂರು ನಿವಾಸಿ 26ರ ಹರೆಯದ ಗಿರೀಶ್ ಮೃತಪಟ್ಟವರು. 24ರ ಹರೆಯದ ಸಂತೋಷ್ ಮತ್ತು ಮೂವತ್ತರ ಹರೆಯದ ಹರೀಶ್ ಎಂಬವರನ್ನು ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಸನದ ದಾಬೆ ಬೇಲೂರಿನಿಂದ ಇಪ್ಪತ್ತು ಜನರ ತಂಡ ಶೃಂಗೇರಿ, ಆಗುಂಬೆ ನೋಡಿ ಮಲ್ಪೆಗೆ ಪ್ರವಾಸ ಬಂದಿದ್ದರು. ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗ ಮೂವರು ಅಲೆಗಳ ಸೆಳೆತಕ್ಕೆ ಸಿಲುಕ್ಕಿದ್ದರಿಂದ ಸ್ಥಳಕ್ಕೆ ಧಾವಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ತಂಡದವರು ಮೂವರನ್ನೂ ಮೇಲಕ್ಕೆತ್ತಿದ್ದರು. ಮೂವರ ಪೈಕಿ ಗಿರೀಶ್ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.