ಉಡುಪಿ :ರಾಜ್ಯದಾದ್ಯಂತ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನತಾ ದರ್ಶನದ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಲು ಮಾಡಿರುವ ಕಾರ್ಯಕ್ರಮ ಸ್ವಾಗತಾರ್ಹವಾಗಿದ್ದು, ಇದರೊಂದಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಉಡುಪಿ ಜಿಲ್ಲೆಯನ್ನು ಮಾತ್ರ ನಿರಂತರವಾಗಿ ಕಡೆಗಣಿಸುತ್ತಾ ಬಜೆಟ್ ಅನುದಾನದಲ್ಲಿಯೂ ಮಲತಾಯಿ ಧೋರಣೆ ಅನುಸರಿಸುತ್ತಿದೆ.
ಜಿಲ್ಲೆಯಲ್ಲಿ 5 ಕ್ಕೆ 5 ಬಿಜೆಪಿ ಶಾಸಕರು ಆಯ್ಕೆಗೊಂಡ ಹಿನ್ನೆಲೆಯಲ್ಲಿ ಹತಾಶೆಗೊಂಡ ರಾಜ್ಯ ಸರ್ಕಾರ ಶಾಸಕರು ಸಲ್ಲಿಸಿದ ಯಾವುದೇ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ.
ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಸೇವೆ ಸಮಸ್ಯೆ, ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅನುದಾನ ಬಿಡುಗಡೆ, ಪ್ರಾಕೃತಿಕ ವಿಕೋಪ ಪರಿಹಾರ ನಿಧಿ ಬಿಡುಗಡೆ ಮಾಡುವಲ್ಲಿ ತಾರತಮ್ಯ, ಕಂದಾಯ, ನಗರಾಭಿವೃದ್ಧಿ ಪ್ರಾಧಿಕಾರ, ನಗರ ಸಭೆ ಸಹಿತ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆ ಭರ್ತಿ ಮಾಡದೇ ಸಾರ್ವಜನಿಕರ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೀರ ಅನಾನುಕೂಲತೆಯಿಂದ ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ.
ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಈ ಹಿಂದೆ ನೀಡುತ್ತಿದ್ದ ಅನುದಾನದ ಬಹುಪಾಲನ್ನು ಮೊಟಕುಗೊಳಿಸಿ, ಗ್ಯಾರಂಟಿ ಭಾಗ್ಯಗಳ ನೆಪದಲ್ಲಿ ಜಿಲ್ಲೆಯ ಅಭಿವದ್ಧಿಯನ್ನು ಸರ್ಕಾರ ಬಲಿಕೊಡಲು ಮುಂದಾಗಿದೆ.
ಸರಕಾರ ಕೂಡಲೇ ಉಡುಪಿ ಜಿಲ್ಲೆಯ ಬಗೆಗಿನ ತನ್ನ ಮಲತಾಯಿ ಧೋರಣೆಯನ್ನು ತೊರೆದು, ಜಿಲ್ಲೆಯ ಸಮಸ್ಯೆಗಳಿಗೆ ಜನತಾ ದರ್ಶನದ ಮೂಲಕವಾದರೂ ಪರಿಹಾರ ಕಲ್ಪಿಸಿ, ಅಭಿವೃದ್ಧಿಗೆ ಸಹಕರಿಸಲಿ ಎಂದು ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.