ಪಾಟ್ನಾ: ಕಂಡಕಂಡಲ್ಲೆಲ್ಲಾ ರೀಲ್ಸ್ ಮಾಡುವ ಹುಚ್ಚು ಈಗಿನ ಯುವ ಜನತೆಯದ್ದು. ಈ ಹುಚ್ಚು ಎಷ್ಟರಮಟ್ಟಿಗೆಂದರೆ ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೂ ಇರುತ್ತದೆ. ಹಲವಾರು ಯುವಕ-ಯುವತಿಯರು ರೀಲ್ಸ್ ಮಾಡುವಾಗ ಅಪಾಯಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಇಲ್ಲೊಬ್ಬಳು ಮಳೆಯಲ್ಲಿ ರೀಲ್ಸ್ ಮಾಡಲು ಹೋಗಿ ಸಿಡಿಲು ಬಡಿತದ ಆಘಾತದಿಂದ ಸ್ವಲ್ಪದರಲ್ಲಿ ಪಾರಾಗಿದ್ದಾಳೆ.
ಬಿಹಾರದ ಸೀತಾಮರ್ಹಿಯಲ್ಲಿ ಹುಡುಗಿಯೊಬ್ಬಳು ಮನೆಯ ಟೆರೇಸ್‌ನಲ್ಲಿ ನಿಂತು ಮಳೆಯಲ್ಲಿ ರೀಲ್ಸ್ ಮಾಡುವುದಕ್ಕಾಗಿ ಡಾನ್ಸ್ ಮಾಡುತ್ತಿದ್ದಳು. ಅದಕ್ಕೆಂದು ಮೊಬೈಲ್ ಸೆಟ್ ಮಾಡಿ ಇನ್ನೇನು ಡಾನ್ಸ್ ಆರಂಭಿಸಬೇಕೆನ್ನುವಷ್ಟರಲ್ಲಿ ಅಲ್ಲೇ ಸಿಡಿಲು ಬಿಡಿದಿದೆ. ಇದರಿಂದ ಭಯಗೊಂಡ ಆಕೆ ಅಲ್ಲಿಂದ ಓಡಿ ಹೋಗಿದ್ದಾಳೆ. ಆಕೆಯ ಅದೃಷ್ಟ ಚೆನ್ನಾಗಿತ್ತು. ಸಿಡಿಲಿನ ಆಘಾತದಿಂದ ಆಕೆ ಪಾರಾಗಿದ್ದಳು. ಆಕೆ ಸೆಟ್ ಮಾಡಿದ್ದ ಮೊಬೈಲ್‌ನಲ್ಲಿ ಈ ದೃಶ್ಯಾವಳಿ ಸೆರೆಯಾಗಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.