ತೌಲವಮಾತೆಯ ಮುಕುಟ ಮಣಿಯೊಂದು ಕಳಚಿ ಬಿತ್ತು
ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ಸಂಸ್ಥಾಪಕರು, ಶಶಿ ಬಂಡಿಮಾರ್ ರವರು ದೂರದ ನಾಗಾಲ್ಯಾಂಡ್ ನಲ್ಲಿ ಅಲ್ಪಕಾಲದ ಅಸೌಖ್ಯದಿಂದ ತೌಳವಮಾತೆಯ ಪಾದ ಸೇರಿದರು ಎಂದು ತಿಳಿಸಲು ವಿಷಾದಿಸುತ್ತೇವೆ. ದಿನದ ಪ್ರತಿಕ್ಷಣವೂ ತುಳು ಭಾಷಾ ಸಂಸ್ಕೃತಿಯ ಬಗ್ಗೆ ಚಿಂತಿಸುತ್ತಿದ್ದ, ಅದಕ್ಕೋಸ್ಕರವೇ ಟೈಮ್ಸ್ ಆಫ್ ಕುಡ್ಲ ಎನ್ನುವ ತುಳುಪತ್ರಿಕೆಯನ್ನು ಸಮಾಜಕ್ಕೆ ಸಮರ್ಪಿಸಿ, ತುಳು ನಾಡು ನುಡಿ ಸಂಸ್ಕೃತಿಯ ಹಿರಿಮೆಯನ್ನು ವಿಶ್ವದಾದ್ಯಂತ ಮೆರೆಸುವುದಕ್ಕಾಗಿ, ಬಪ್ಪನಾಡು ದುರ್ಗಾಪರಮೇಶ್ವರಿ ತಾಯಿಯ ಕ್ಷೇತ್ರದ ಆವರಣದಲ್ಲಿ ತುಳು ಸಮ್ಮೇಳನವನ್ನ ಗೈದು ಅಸಂಖ್ಯ ತುಳು ಸಾಧಕರನ್ನು ಗುರುತಿಸಿ ತುಳುವಿನ ಬಗ್ಗೆ ಸರಕಾರದ ಕಣ್ತೆರೆಸುವ ಪ್ರಯತ್ನ ಮಾಡಿದ್ದಾರೆ. ನಷ್ಟದಲ್ಲಿ ನಡಿತಾ ಇದ್ದ ಪತ್ರಿಕೋದ್ಯಮವನ್ನು ಬಲಿಷ್ಠ ಪಡಿಸುವುದಕ್ಕಾಗಿ, ದೂರದ ನಾಗಾಲ್ಯಾಂಡ್ ನಲ್ಲಿ ಫರ್ನಿಚರ್ ತಯಾರಿಸಿ ಅದರ ವ್ಯಾಪಾರವನ್ನು ಮಾಡಿ ಅದರಲ್ಲಿ ಬಂದ ಸಂಪತ್ತನ್ನು ತುಳುಪತ್ರಿಕೆಗೆ ಭಾಷಾ ಸಾಹಿತ್ಯಕ್ಕೆ ವಿನಿಯೋಗ ಮಾಡುತ್ತಿದ್ದ ಬಂಡಿಮಾರ್ರವರು ತುಳು ಭಾಷೆಗೆ ತನ್ನದೇ ರೀತಿಯಲ್ಲಿ ಕೊಡುಗೆಯನ್ನು ನೀಡಿದ್ದಾರೆ.
ತುಳು ಸಂಸ್ಕೃತಿ ಆಚಾರ ವಿಚಾರದ ಉಳಿವಿಗಾಗಿ ಶ್ರಮಿಸಿ “ಟೈಮ್ಸ್ ಆಫ್ ಕುಡ್ಲ” ಎಂಬ ತುಳು ವಾರಪತ್ರಿಕೆಯನ್ನು 15 ವರ್ಷಗಳಿಂದ ನಡೆಸಿಕೊಂಡು ಬಂದಿದ್ದರು. ಸಣ್ಣ ಕೈಗಾರಿಕೆಯಲ್ಲೂ, ಆತಿಥ್ಯ ಕ್ಷೇತ್ರ ದಲ್ಲೂ ಸಕ್ರಿಯವಾಗಿದ್ದ ಅವರು ನಾಗಾಲ್ಯಾಂಡ್ ನಲ್ಲಿ ತನ್ನ ಮರದ ಫ್ಯಾಕ್ಟರಿಗೆ ಹೋಗಿದ್ದಾಗ ಅನಾರೋಗ್ಯ ಕಾಡಿತ್ತು.
ಶಶಿ ಬಂಡಿಮಾರ್ ಅವರಿಗೆ ಜೈ ತುಲುನಾಡ್ (ರಿ) ಸಂಘಟನೆ “ತುಳುವ ನೇಸರೆ” ಎನ್ನುವ ಬಿರುದು ಸೇರಿದಂತೆ ಅನೇಕ ಬಿರುದು ಪ್ರಶಸ್ತಿಗಳನ್ನು ಅನೇಕ ತುಳು ಸಂಘಟನೆಗಳು ನೀಡಿ ಗೌರವಿಸಿದ್ದವು.
ಅವರು ತಾಯಿ, ಪತ್ನಿ, ಸಹೋದರಿ, ಇಬ್ಬರು ಸಹೋದರರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.