ತಿರುಪತಿ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಆಡಳಿತಾವಧಿಯಲ್ಲಿ ಜಗತ್ಪ್ರಸಿದ್ಧ ತಿರುಪತಿ ದೇವಸ್ಥಾನದ ಪ್ರಸಾದ ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಇತರ ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸಲಾಗಿದೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪಿಸಿದೆ. ಈ ಕುರಿತಂತೆ ಪಕ್ಷವು ಲ್ಯಾಬ್ ವರದಿಯನ್ನೂ ಉಲ್ಲೇಖಿಸಿದೆ. ತಿರುಪತಿ ಲಡ್ಡು ತಯಾರಿಕೆಗೆ ಬಳಸಲಾಗಿದ್ದ ತುಪ್ಪದಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಮತ್ತು ಪಾಮ್ ಆಯಿಲ್ ಇದೆ ಎಂದು ಗುಜರಾತ್‌ನ ಕಾಫ್ ಪ್ರಯೋಗಾಲಯ ವರದಿ ನೀಡಿದೆ.
ಗುಜರಾತ್‌ನ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೆ ಕಳುಹಿಸಲಾದ ಮಾದರಿಗಳ ವಿಶ್ಲೇಷಣೆಯು ಗೋಮಾಂಸ ಟಾಲೋ, ಮೀನಿನ ಎಣ್ಣೆ ಮತ್ತು ಹಂದಿಮಾಂಸದ ಕೊಬ್ಬಿನ ಅಂಗಾಶವನ್ನು ನೀಡುವ ಮೂಲಕ ಪಡೆದ ಅರೆ ಘನ ಬಿಳಿ ಕೊಬ್ಬಿನ ಉತ್ಪನ್ನ ಹಿಂದಿನ ಆಡಳಿತದಲ್ಲಿ ತಿರುಪತಿ ಲಡ್ಡು ತಯಾರಿಸಲು ಬಳಸಲಾಗುತ್ತಿದ್ದ ತುಪ್ಪ ತಯಾರಿಸಲು ಬಳಸಲಾದ ಪದಾರ್ಥಗಳಲ್ಲಿ ಸೇರಿವೆ ಎಂದು ದೃಢಪಡಿಸಿದೆ ಎಂದು ಟಿಡಿಪಿ ಮುಖಂಡ ಆನಂ ವೆಂಕಟರಮಣ ರೆಡ್ಡಿ ಹೇಳಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನಕ್ಕೆ ಸರಬರಾಜು ಮಾಡಿದ ತುಪ್ಪವನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಒಂದು ಪದಾರ್ಥವಾಗ ಬಳಸಲಾಗಿದೆ ಎಂದು ಚಂದ್ರಬಾಬು ನಾಯ್ಡು ಇದಕ್ಕೂ ಮೊದಲು ಹೇಳಿದ್ದರು. ಈ ವಿವಾದ ಇದೀಗ ದೇಶಾದ್ಯಂತ ಸಂಚಲನ ಮೂಡಿಸಿದ್ದು, ತಿರುಪತಿ ತಿರುಮಲ ಭಕ್ತರಲ್ಲಿ ಆಕ್ರೋಶವನ್ನುಂಟು ಮಾಡಿದೆ.