ಕಾಂಗ್ರೆಸ್ಸಿನ ತುಷ್ಟೀಕರಣ ನೀತಿ, ಒಡೆದು ಆಳುವ ನೀತಿ, ಸ್ವಾರ್ಥ ರಾಜಕಾರಣದ ಫಲವಾಗಿ ರೈತರ, ಮಠಮಾನ್ಯಗಳ ಅಸ್ತಿಯನ್ನು ಕಬಳಿಸುತ್ತಿರುವ ವಕ್ಫ್ ಬೋರ್ಡ್ ಅಕ್ರಮವನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ “ನಮ್ಮ ಭೂಮಿ ನಮ್ಮ ಹಕ್ಕು” ಘೋಷ ವಾಕ್ಯದೊಂದಿಗೆ ನಾಳೆ ನವೆಂಬರ್ 21, ಗುರುವಾರ ಬೆಳಿಗ್ಗೆ ಗಂಟೆ 10.00ರಿಂದ ಸಂಜೆಯ ವರೆಗೆ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಬಳಿ ‘ಬೃಹತ್ ಪ್ರತಿಭಟನೆ’ ಮತ್ತು ‘ಧರಣಿ ಸತ್ಯಾಗ್ರಹ’ ನಡೆಯಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.
ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕ ಕಾಲದಲ್ಲಿ ನಡೆಯುವ ಈ ‘ಬೃಹತ್ ಪ್ರತಿಭಟನೆ’ ಮತ್ತು ‘ಧರಣಿ ಸತ್ಯಾಗ್ರಹ’ದಲ್ಲಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಪಕ್ಷದ ಪ್ರಮುಖರ ಸಹಿತ ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ, ಮಹಾ ಶಕ್ತಿಕೇಂದ್ರ, ಶಕ್ತಿಕೇಂದ್ರ ಮತ್ತು ಬೂತ್ ಪದಾಧಿಕಾರಿಗಳು, ಸಮಿತಿ ಸದಸ್ಯರು, ಕಾರ್ಯಕಾರಿಣಿ ಸದಸ್ಯರು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರು, ಎಲ್ಲಾ ಸ್ತರದ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತ ಬಂಧುಗಳು, ಪಕ್ಷದ ಹಿತೈಷಿಗಳು, ರೈತಾಪಿ ವರ್ಗ, ಸಂತ್ರಸ್ತ ಸಾರ್ವಜನಿಕ ಬಂಧುಗಳು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ರೈತರ, ಮಠ ಮಂದಿರಗಳ, ಸಾರ್ವಜನಿಕರ ಭೂಮಿಯನ್ನು ವಕ್ಫ್ ಕರಾಳ ಹಸ್ತದಿಂದ ರಕ್ಷಿಸಲು ನಡೆಯುವ ಈ ಸಂಘಟಿತ ಹೋರಾಟದಲ್ಲಿ ರಾಜ್ಯ ಸರಕಾರದ ವಿರುದ್ಧ ಧ್ವನಿ ಎತ್ತಲಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.