ಮಂಗಳೂರು : 2025ರ ‘ವಿಶ್ವ ಅರಣ್ಯ ದಿನ’ ಮತ್ತು ‘ವಿಶ್ವ ಜಲ ದಿನ’ವನ್ನು ಆಚರಿಸಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ವಿಚಾರದಲ್ಲಿ ಬದ್ಧವಾಗಿರುವುದಾಗಿ ಸಾರಿದೆ. ಜಾಗತಿಕ ಟೊಯೋಟಾ ಎನ್ವಿರಾನ್ಮೆಂಟಲ್ ಚಾಲೆಂಜ್ 2050 (ಟಿಇಸಿ 2050) ಒಟ್ಟು ಆರು ಸವಾಲುಗಳನ್ನು ಹೊಂದಿದ್ದು, ‘ಪರಿಸರದ ಮೇಲೆ ಶೂನ್ಯ ಪರಿಣಾಮ ಬೀರುವುದು ಮತ್ತು ಸಕಾರಾತ್ಮಕ ಪರಿಣಾಮ ಬೀರುವುದು’ ಎಂಬ ವಿಚಾರದ ಕಡೆಗೆ ಗಮನ ಹರಿಸುತ್ತಿದೆ.
ಈ ನಿಟ್ಟಿನಲ್ಲಿ ನೀರನ್ನು ಅಮೂಲ್ಯ ಸಂಪತ್ತು ಎಂದು ಗುರುತಿಸಿರುವ ಟಿಕೆಎಂ ಸೂಕ್ತ ರೀತಿಯಲ್ಲಿ ನೀರಿನ ಬಳಕೆಯನ್ನು ಮಾಡಲು ತನ್ನ ಕಾರ್ಖಾನೆಯಲ್ಲಿ ‘4ಆರ್’ ತಂತ್ರವನ್ನು ಅನುಸರಿಸುತ್ತದೆ. 4ಆರ್ ಎಂದರೆ, ಕಡಿಮೆ ಮಾಡು (ರೆಡ್ಯೂಸ್), ಮರುಬಳಕೆ (ರೀಯೂಸ್), ಪುನರ್ಬಳಕೆ (ರೀಸೈಕಲ್) ಮತ್ತು ಮರುಪೂರಣ (ರೀಚಾರ್ಜ್).
ಜೀವವೈವಿಧ್ಯತೆ ಸಂರಕ್ಷಣೆಗೂ ಬದ್ಧವಾಗಿರುವ ಟಿಕೆಎಂ ಸಂಸ್ಥೆಯು ಅರಣ್ಯ ಹೆಚ್ಚಿಸುವ ಯೋಜನೆಗಳಿಗೆ ಭಾರಿ ಬೆಂಬಲ ನೀಡಿದೆ. ಟೊಯೋಟಾ ಗ್ರೀನ್ ವೇವ್ ಪ್ರಾಜೆಕ್ಟ್ ಮೂಲಕ 2009ರಿಂದಲೇ ಟಿಕೆಎಂ ತನ್ನ ಘಟಕದ ವಾತಾವರಣದಲ್ಲಿ 3,28,000ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದೆ, ಇದರಲ್ಲಿ 790ಕ್ಕೂ ಹೆಚ್ಚು ತಳಿಗಳ ಸಸ್ಯಗಳಿವೆ ಮತ್ತು 410 ಜಾತಿಯ ಪ್ರಾಣಿಗಳು ಈ ಪರಿಸರ ವ್ಯವಸ್ಥೆಯಲ್ಲಿ ವಾಸಿಸುತ್ತಿವೆ.
ಈ ಕುರಿತು ಮಾತನಾಡಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಉತ್ಪಾದನಾ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ನಿರ್ದೇಶಕರಾದ ಶ್ರೀ ಬಿ. ಪದ್ಮನಾಭ ಅವರು, “ನಮ್ಮ ವ್ಯವಹಾರದ ಪ್ರತೀ ಅಂಶದಲ್ಲಿಯೂ ಸುಸ್ಥಿರತೆಯನ್ನು ಕಾಪಾಡಿಕೊಳ್ಳುತ್ತೇವೆ. ಭಾರತದಲ್ಲಿ ನಾವು ಯಶಸ್ವಿಯಾಗಿ 26 ವರ್ಷಗಳನ್ನು ಕಳೆದಿದ್ದು, ಹೊಸತನ, ಕಾರ್ಪೊರೇಟ್ ಜವಾಬ್ದಾರಿ ಮೆರೆದಿದ್ದೇವೆ ಮತ್ತು ಸಮುದಾಯಗಳೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಂಡಿದ್ದೇವೆ. ಟಿಇಸಿ 2050ರ ಮಾರ್ಗದರ್ಶನದಲ್ಲಿ ನಾವು ಕಾರ್ಖಾನೆ ಕಾರ್ಯಾಚರಣೆಗಳಲ್ಲಿ ಮಾತ್ರವಲ್ಲದೆ ಇಡೀ ಮೌಲ್ಯ ಸರಪಳಿಯಲ್ಲಿ ಸುಸ್ಥಿರ ಅಭ್ಯಾಸಗಳನ್ನು ಸಂಯೋಜಿಸಿ ಸಮಾಜದಲ್ಲಿ ನಿಜವಾದ ಬದಲಾವಣೆಯನ್ನು ಉಂಟು ಮಾಡುತ್ತಿದ್ದೇವೆ” ಎಂದು ಹೇಳಿದರು.
