ಜೈಪುರ: ಫೋಟೊ ಶೂಟ್ ಕ್ರೇಝ್ ಜನರನ್ನು ಎಂಥಾ ಅಪಾಯಕ್ಕೆ ಸಿಲುಕಿಸುತ್ತದೆ ಎನ್ನುವುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ. ರೈಲ್ವೆ ಸೇತುವೆ ಮೇಲೆ ಫೋಟೊ ಶೂಟ್ ಮಾಡುತ್ತಿದ್ದ ವೇಳೆಯೇ ರೈಲು ಆಗಮಿಸಿದ್ದರಿಂದ ಜೋಡಿಯೊಂದು ಸೇತುವೆಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದೆ. ರಾಜಸ್ಥಾನದ ಪಾಲಿ ಜಿಲ್ಲೆಯ ಗೋರ್ಮ್‌ಘಾಟ್ ಬಳಿಯ ಹೆರಿಟೇಜ್ ರೈಲ್ವೆ ಬ್ರಿಜ್ ಮೇಲೆ ಈ ದುರ್ಘಟನೆ ಸಂಭವಿಸಿದೆ.
ಬಗ್ದಿ ನಗರ ನಿವಾಸಿಗಳಾದ ರಾಹುಲ್ ಮೇವಾಡ (22) ಮತ್ತು ಅವರ ಪತ್ನಿ ಜಾಹ್ನವಿ (20) ರೈಲ್ವೆ ಬ್ರಿಜ್ ಮೇಲೆ ಫೋಟೊ ಶೂಟ್ ನಡೆಸುತ್ತಿದ್ದಾಗ ಏಕಾಏಕಿ ರೈಲು ಆಗಮಿಸಿದೆ. ಇದೇ ಸಮಯ ಏಕಾಏಕಿ ರೈಲು ಬಂದಿದ್ದರಿಂದ ಯಾವ ಕಡೆಗೆ ಹೋಗಬೇಕೆಂದು ಗೊತ್ತಾಗದೆ ಭಯದಿಂದ ಸೇತುವೆ ಮೇಲಿಂದ 90 ಅಡಿ ಆಳಕ್ಕೆ ಬಿದ್ದಿದ್ದಾರೆ. ಇದರಿಂದ ರಾಹುಲ್ ಅವರ ಬೆನ್ನು ಮೂಳೆ ಮುರಿದಿದೆ. ಜಾಹ್ನವಿಯ ಕಾಲು ಮುರಿದಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳದಲ್ಲಿದ್ದ ಇನ್ನಿಬ್ಬರು ರೈಲು ಬರುವುದನ್ನು ನೋಡಿ ಓಡಿ ಪಾರಾಗಿದ್ದಾರೆ. ದಂಪತಿ ರೈಲ್ವೆ ಸೇತುವೆಯಿಂದ ಕೆಳಗೆ ಬೀಳುತ್ತಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋ ನೋಡಲು ಇಲ್ಲಿ ಲಿಂಕ್ ಕ್ಲಿಕ್ ಮಾಡಿ…