ಮಂಗಳೂರು: ದುಬೈ-ಮಂಗಳೂರು ವಿಮಾನದಲ್ಲಿ ಪ್ರಯಾಣಿಕರೊಬ್ಬರು ವಿಮಾನದಿಂದ ಸಮುದ್ರಕ್ಕೆ ಹಾರುವುದಾಗಿ ಬೆದರಿಕೆಯೊಡ್ಡಿ, ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಬಗ್ಗೆ ವರದಿಯಾಗಿದೆ. ದುಬೈನಿಂದ ಮಂಗಳೂರಿಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಈ ಘಟನೆ ನಡೆದಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ಭದ್ರತಾ ಸಂಯೋಜಕ ಸಿದ್ಧಾರ್ಥ ದಾಸ್ ನೀಡಿರುವ ದೂರಿನ ಆಧಾರದಲ್ಲಿ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳದ ಕಣ್ಣೂರಿನ ನಿವಾಸಿಯಾಗಿರುವ ಮುಹಮ್ಮದ್ ಬಿ.ಸಿ. ವಿರುದ್ಧ ಈ ಆರೋಪ ಕೇಳಿಬಂದಿದೆ. ದುಬೈನಿಂದ ವಿಮಾನ ಹೊರಟ ಬಳಿಕ ಮೊಹಮ್ಮದ್ ಶೌಚಾಲಯಕ್ಕೆ ತೆರಳಿದ್ದು ನಂತರ ಹೊರಬಂದು ವಿಮಾನದ ಸಿಬ್ಬಂದಿ ಜೊತೆ ಅಸಂಬದ್ಧ ಪ್ರಶ್ನೆ ಕೇಳಿದ್ದರು. ಸಿಬ್ಬಂದಿ ಆತನ ಬಳಿಯೇ ಇದ್ದರೂ ಪದೇಪದೇ ಬಟನ್ ಒತ್ತಿ ಕಿರುಕುಳ ನೀಡಿದ್ದಾನೆ. ನಂತರ ಆತ ವಿಮಾನದಲ್ಲಿನ ಲೈಫ್ ಜಾಕೆಟ್ ತೆಗೆದು ಸಿಬ್ಬಂದಿ ಕೈಗೆ ನೀಡಿದ್ದಾನೆ. ವಿಮಾನ ಸಮುದ್ರದ ಮೇಲಿರುವಾಗ ತಾನು ವಿಮಾನದಿಂದ ಹೊರಗಿಳಿಯಬೇಕು, ಹಾರಬೇಕು ಎಂದು ಬೆದರಿಕೆ ಒಡ್ಡಿ ಇತರ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿರುತ್ತಾನೆ ಎಂದು ದೂರು ನೀಡಲಾಗಿದೆ.
ವಿಮಾನದಿಂದ ಇಳಿದ ನಂತರವೂ ಅನುಚಿತವಾಗಿ ವರ್ತಿಸಿದ್ದಾನೆ. ಹೀಗಾಗಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.