ಶಿರಸಿ: ಅತಿ ಕಿರಿಯ ವಯಸ್ಸಿನಲ್ಲೇ ವಿಶ್ವಶಾಂತಿಗೆ ಯಕ್ಷ ನೃತ್ಯ ಮಾಡುವ ಮೂಲಕ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಪ್ರತಿಷ್ಠಿತ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ವಿಶ್ವದಾಖಲೆ ರೂಪಿಸಿದ್ದಾರೆ. ಲಂಡನ್ ಮೂಲದ ಪ್ರತಿಷ್ಠಿತ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ವಿಶ್ವದಾಖಲೆ ಪಟ್ಟಿಯಲ್ಲಿ ತುಳಸಿ ಹೆಗಡೆ ಹೆಸರು ಸೇರ್ಪಡೆಗೊಂಡಿದೆ.
ಯಕ್ಷಗಾನ ಕಲಾಪ್ರಕಾರದ ಮೂಲಕ ವಿಶ್ವಶಾಂತಿಗೆ ಈವರೆಗೆ 9 ಕಲಾ ಕುಸುಮದ ಮೂಲದ ಕೊಡುಗೆಗಳನ್ನು ನೀಡುತ್ತಿರುವ ತುಳಸಿ ಹೆಗಡೆಯ ಸಾಧನೆ ಗುರುತಿಸಿ ಮಕ್ಕಳ ವಿಭಾಗದ ತನ್ನ ದಾಖಲಾತಿಯಲ್ಲಿ ಸೇರಿಸಿಕೊಂಡಿದೆ.
ಬೆರಳ ತುದಿಯಲ್ಲಿ ನೃತ್ಯ ಮಾಡುವ ವಿದೇಶಿ ನೃತ್ಯ ಕಲಾ ಪ್ರಕಾರ ಹೊರತುಪಡಿಸಿದರೆ ಈ ವಿಭಾಗದಲ್ಲಿ ಪ್ರಪಂಚದ ಯಾವುದೇ ಕಲಾ ಪ್ರಕಾರ ಈ ದಾಖಲಾತಿ ಪಟ್ಟಿಗೆ ಸೇರಿಲ್ಲ ಎಂದು ಸಂಸ್ಥೆ ತಿಳಿಸಿದೆ. ತುಳಸಿ ಹೆಗಡೆಯವರ ಯಕ್ಷ ರೂಪಕದ ಮೂಲಕ ಯಕ್ಷಗಾನದ ಹೆಸರೂ ಇದೇ ಮೊದಲ ಬಾರಿಗೆ ವಿಶ್ವದಾಖಲೆ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ತುಳಸಿ ತಮ್ಮ ಮೂರನೇ ವರ್ಷದಿಂದಲೇ ಯಕ್ಷಗಾನ ಕ್ಷೇತ್ರಕ್ಕೆ ಹೆಜ್ಜೆಯಿಟ್ಟಿದ್ದಳು. ಐದೂವರೆ ವರ್ಷದಿಂದ ವಿಶ್ವಶಾಂತಿ ರೂಪಕಗಳನ್ನು ಈಕೆ ಪ್ರದರ್ಶಿಸಿದ್ದಾಳೆ. ಸುಮಾರು 850ಕ್ಕೂ ಹೆಚ್ಚು ಇಂತಹ ಪ್ರದರ್ಶನಗಳನ್ನು ಆಕೆ ನೀಡಿದ್ದಾಳೆ.