ಮಂಗಳೂರು : ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಶೀಘ್ರವಾಗಿ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯೋತ್ಸವ ಸಿದ್ಧತೆ ಬಗ್ಗೆ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ಸಮಾರೋಪ ಕಾರ್ಯಕ್ರಮದ ಬಗ್ಗೆ ಆಯೋಜಿಸಲಾದ ಎಲ್ಲಾ ಅಕಾಡೆಮಿ ,ಪ್ರಾಧಿಕಾರದ ಅಧ್ಯಕ್ಷರ ಸಭೆಯಲ್ಲಿ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಅವರು ಈ ಒತ್ತಾಯ ಮಾಡಿದರು.
ಕರ್ನಾಟಕ ಎಂದು ನಾಮಕರಣಗೊಂಡ ಐವತ್ತನೇ ವರ್ಷದ ಈ ಸಂಭ್ರಮದ ಸಮಯದಲ್ಲಿ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಿದರೆ ತುಳುವರು ನಿಜಕ್ಕೂ ಸಂಭ್ರಮ ಪಡುತ್ತಾರೆ ಎಂದು ಈ ಸಂದರ್ಭದಲ್ಲಿ ತಾರಾನಾಥ್ ಗಟ್ಟಿ ಅವರು ಅಭಿಪ್ರಾಯ ಪಟ್ಟರು. ಈ ಬಗ್ಗೆ ಸೂಕ್ತವಾಗಿ ಸ್ಪಂದಿಸುವುದಾಗಿ ಮುಖ್ಯಮಂತ್ರಿಯವರು ಪ್ರತಿಕ್ರಿಯಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರು, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿ, ಹೆಚ್ಚುವರಿ ಅಧಿಕೃತ ಭಾಷೆಗಳನ್ನು ಜಾರಿಗೊಳಿಸಿರುವ ವಿವಿಧ ರಾಜ್ಯಗಳ ವರದಿ ತರಿಸಲಾಗಿರುವ ಬಗ್ಗೆ ಮಾಹಿತಿ ನೀಡಿದರು. ಶೀಘ್ರವಾಗಿ ತುಳುವರಿಗೆ ಶುಭ ಸುದ್ದಿ ನೀಡುವುದಾಗಿ ಶಿವರಾಜ್ ತಂಗಡಗಿ ಅವರು ತುಳು ಅಕಾಡೆಮಿ ಅಧ್ಯಕ್ಷರಿಗೆ ಈ ಸಂದರ್ಭದಲ್ಲಿ ಭರವಸೆ ನೀಡಿದರು.