Saturday, February 15, 2025
Homeಅಂತಾರಾಷ್ಟ್ರೀಯಬಹರೈನ್‌ ತುಳುಕೂಟದ ವತಿಯಿಂದ ಆಟಿದ ಒಂಜಿ ದಿನ | ಸಹಸ್ರಾರು ತುಳುವರು ಭಾಗಿ

ಬಹರೈನ್‌ ತುಳುಕೂಟದ ವತಿಯಿಂದ ಆಟಿದ ಒಂಜಿ ದಿನ | ಸಹಸ್ರಾರು ತುಳುವರು ಭಾಗಿ

ತುಳುಕೂಟ ಬಹರೈನ್‌ ಇತ್ತೀಚೆಗೆ ಆಟಿದ ಒಂಜಿ ದಿನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಬಹರೈನ್‌ ದೇಶದಲ್ಲಿ ಹಮ್ಮಿಕೊಂಡಿದ್ದ ಪ್ರಪ್ರಥಮ ಆಟಿದ ಒಂಜಿ ದಿನ ಕಾರ್ಯಕ್ರಮ ಇದಾಗಿದ್ದು, ದ್ವೀಪದಾದ್ಯಂತದ ತುಳುವರಲ್ಲಿ ಹಾಗೂ ಕನ್ನಡಿಗರಲ್ಲಿ ಇದು ಸಂಚಲನವನ್ನುಂಟು ಮಾಡಿತ್ತು. ಕರಾವಳಿಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಸಂಘಟಿಸಿ ಪ್ರಸಿದ್ಧಿ ಪಡೆದಿರುವ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಂದ್ರಶೇಖರ ಸುವರ್ಣ ಮುಲ್ಕಿ ಇವರ ನಿರ್ದೇಶನದಲ್ಲಿ ಸದ್ರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇವರಲ್ಲದೆ ನಮ್ಮ ಟಿವಿ ವಾಹಿನಿಯ ನಿರೂಪಕರಾದ ನವೀನ್‌ ಶೆಟ್ಟಿ ಎಡ್ಮೆಮಾರ್‌, ಬಂಟ್ಸ್‌ ಕತಾರ್‌ ಸಂಸ್ಥೆಯ ಅಧ್ಯಕ್ಷ ನವೀನ್‌ ಶೆಟ್ಟಿ ಇರುವೈಲ್‌ ಹಾಗೂ ಗಗನ್‌ ಸುವರ್ಣ ಮುಲ್ಕಿ ಇವರೂ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು. ಕೊಂಕಣಿ, ಮುಸ್ಲಿಂ ಸಂಘಟನೆಗಳು ಸಹಿತ ವಿವಿಧ ಸಂಘಟನೆಗಳು ಕಾರ್ಯಕ್ರಮಕ್ಕೆ ಬೆಂಬಲಿಸಿದ್ದವು. ಅವುಗಳ ಅಧ್ಯಕ್ಷರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಬಹ್ರೆನ್‌ನ ಇಂಡಿಯನ್‌ ಕ್ಲಬ್‌ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ತುಳುವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತುಳುನಾಡಿನ ಪ್ರಾಚೀನ ಆಟೋಟಗಳನ್ನು ಪರಿಚಯಸಲಾಗಿದ್ದು, ಅದಕ್ಕೆ ಹೆಚ್ಚಿನ ಪ್ರತಿಕ್ರಿಯೆ ಲಭ್ಯವಾಯಿತು. ತುಳುಕೂಟದ ಮುಖ್ಯಸ್ಥ ರಾಝ್‌ ಕುಮಾರ್‌ ಭಾರತೀಯ ರಾಯಭಾರಿಗಳು ಹಾಗೂ ಅತಿಥಿಗಳನ್ನು ಸ್ವಾಗತಿಸಿದರು. ಇನ್ನೊಬ್ಬ ಮುಖ್ಯಸ್ಥ ಆಸ್ಟಿನ್‌ ಸಂತೋಷ್‌ ಸಂಘಟನೆಗಳ ಅಧ್ಯಕ್ಷರುಗಳನ್ನು ವೇದಿಕೆಗೆ ಆಹ್ವಾನಿಸಿದರು. ತುಳುನಾಡಿನಿಂದ ತಂದಿದ್ದ ಮಲ್ಲಿಗೆ, ಸೇವಂತಿಗೆ, ಗೊಂಡೆ ಹೂವುಗಳು, ಪಿಂಗಾರ, ತೆಂಗಿನ ಮರದ ಕೊಂಬು, ಬಾಳೆ ಗಿಡ ಮಾವಿನ ಎಲೆಗಳು, ಹಲಸಿನ ಹಣ್ಣು ಇತ್ಯಾದಿಗಳಿಂದ ಮಾಡಿದ್ದ ಅಲಂಕಾರ ಕಾರ್ಯಕ್ರಮದ ಸೌಂದರ್ಯ ಹೆಚ್ಚಿಸಿತ್ತು. ಅತಿಥಿಗಳಿಗೆ ತುಳು ಲಾಂಛನಗಳನ್ನೊಳಗೊಂಡ ಶಾಲುಗಳನ್ನು ಹಾಕಿ, ವೀಲ್ಯದೆಲೆ, ಅಡಿಕೆ, ಪಿಂಗಾರಗಳನ್ನು ನೀಡಿ ಸ್ವಾಗತಿಸಲಾಯಿತು. ಓಲೆ ಬೆಲ್ಲ, ನೀರು ಹಾಗೂ ಪಾನಕ ನೀಡಲಾಯಿತು.
ಹಿಂದೂ, ಕ್ರೈಸ್ತ, ಮುಸ್ಲಿಂ ಧಾರ್ಮಿಕ ಮುಖಂಡರು ನಾವೆಲ್ಲಾ ಒಂದೆ ಎಂಬ ಸಂದೇಶ ಸಾರಿದರು. ಹುಲಿ ವೇಷದ ವೇಷಧಾರಿಗಳು ಹುಲಿ ಕುಣಿತ ಪ್ರದರ್ಶಿಸಿದರು. ತುಳುನಾಡಿನ ಶೈಲಿಯಲ್ಲೇ ಬಣ್ಣಕ್ಕೆ ಮೈಯೊಡ್ಡಿದ ಹುಲಿ ವೇಷಧಾರಿಗಳ ವೇಷಭೂಷಣಗಳನ್ನು ಮಂಗಳೂರಿನಿಂದಲೇ ತರಿಸಲಾಗಿತ್ತು. ಸುಮಾರು ನೂರಕ್ಕೂ ಮೀರಿದ ಕಲಾವಿದರು ತುಳು ಜಾನಪದ ಮತ್ತು ಸಾಂಸ್ಕೃತಿಕ ನೃತ್ಯಗಳನ್ನು ಮಾಡಿದರು. ಚಂದ್ರಶೇಖರ ಸುವರ್ಣ, ನವೀನ ಶೆಟ್ಟಿ ಎಡ್ಮೆಮಾರ್‌, ನವೀನ ಶೆಟ್ಟಿ ಇರುವೈಲ್‌, ಗಗನ್‌ ಸುವರ್ಣರನ್ನು ಸನ್ಮಾನಿಸಲಾಯಿತು. ಹಿರಿಯ ತುಳುವ ಕೊಂಕಣಿ ಸಮುದಾಯದ ಪ್ರಮುಖ ವ್ಯಕ್ತಿ ಜೋಯೆಲ್‌ ಡೇಸಾರನ್ನು ಗೌರವಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದ ಕೊನೆಗೆ ಆಟಿ ತಿಂಗಳಿನ ಖಾದ್ಯಗಳನ್ನು ಸವಿಯುವ ಏರ್ಪಾಡು ಮಾಡಲಾಗಿತ್ತು. ಸುಮಾರು 60ಕ್ಕೂ ಹೆಚ್ಚು ಮನೆಗಳಲ್ಲಿ ತಯಾರಿಸಿ ಹಲಸಿನ ಗಟ್ಟಿ, ಹಳದಿ ಎಳೆಯ ಗಟ್ಟಿ, ತಿಮರೆ ಹಾಗೂ ಚಟ್ನಿಗಳು, ಕೆಸುವಿನಿಂದ ಎಲೆಯಿಂದ ತಯಾರಿಸಿದ ಪತ್ರೊಡೆ, ಹಲಸಿನ ಕಾಯಿ ಪದಾರ್ಧ ಸೆರಿ ಹತ್ತು ಹಲವು ತುಳುನಾಡಿನ ಖಾದ್ಯ ತರಲಾಗಿತ್ತು. ಅದಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಮಂಗಳೂರಿನಿಂದಲೇ ತರಿಸಲಾಗಿತ್ತು.
ಹುಲಿ ವೇಷದ ಉಸ್ತುವಾರಿಯನ್ನು ಗಣೇಶ್‌ ಸಾಲ್ಯಾನ್‌, ಚಿರಾಗ್‌ ಸುವರ್ಣ ವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಜವಾಬ್ದಾರಿ ನಮಿತಾ ಸಾಲ್ಯಾನ್‌, ಪ್ರೀತಂ ಆಚಾರ್ಯ ವಹಿಸಿದ್ದರು. ಲೋಲಾಕ್ಷಿ ರಾಜಾರಾಮ್‌ ನೇತತ್ವದಲ್ಲಿ ಖಾದ್ಯಗಳನ್ನು ತಯಾರಿಸಿ ಪ್ರದರ್ಶಿಸಲಾಗಿತ್ತು.


RELATED ARTICLES
- Advertisment -
Google search engine

Most Popular