ಮಂಗಳೂರು: ಕೋಮುದ್ವೇಷದಿಂದ ಜಿಲ್ಲೆಯಲ್ಲಿ ನಡೆದಿದ್ದ ಎರಡು ಹತ್ಯೆ ಪ್ರಕರಣಗಳ ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಬಂಟ್ವಾಳ ತಾಲೂಕು ಸಜೀಪಮೂಡ ಗ್ರಾಮದ ಕೊಳಕೆಯಲ್ಲಿ 2015 ರಲ್ಲಿ ನಡೆದಿದ್ದ ಮೊಹಮ್ಮದ್ ನಾಸಿರ್ ಎಂಬವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹತ್ತು ಮಂದಿ ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಲಾಗಿದೆ. ಒಂದನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ನೀಡಲಾಗಿದೆ. ಮೊಹಮ್ಮದ್ ನಾಸಿರ್ ರನ್ನು ಕೊಲೆ ಮಾಡಿದ ವಿಜೇತ್ ಕುಮಾರ್, ಕಿರಣ್ ಪೂಜಾರಿ, ಅನೀಶ್, ಅಭಿ ದೋಷಿಗಳು ಎಂದು ಘೋಷಿಸಲಾಗಿದೆ.
2016 ರಲ್ಲಿ ನಡೆದ ಉಳ್ಳಾಲದ ಕೋಟೆಪುರದಲ್ಲಿ ರಾಜೇಶ್ ಕೋಟ್ಯಾನ್ ಹತ್ಯೆ ಮಾಡಿದ ಪ್ರಕರಣದಲ್ಲಿ ಮೊಹಮ್ಮದ್ ಆಸಿಫ್, ಮೊಹಮ್ಮದ್ ಸುಹೇಲ್, ಅಬ್ದುಲ್ ಮುತಾಲಿಕ್, ಅಬ್ದುಲ್ ಅಸ್ಫೀರ್ ದೋಷಿಗಳು ಎಂದು ಪರಿಗಣಿಸಲಾಗಿದೆ. 2015 ರ ಆಗಸ್ಟ್ 6ರಂದು ಮೊಹಮ್ಮದ್ ನಾಸಿರ್ ಎಂಬವರು ಮೊಹಮ್ಮದ್ ಮುಸ್ತಫಾ ಅವರ ಆಟೊದಲ್ಲಿ ಪ್ರಯಾಣಿಸುತ್ತಿದ್ದಾಗ ದ್ವಿಚಕ್ರ ವಾಹನಗಳಲ್ಲಿ ಬಂದ ಆರೋಪಿಗಳು ದಾರಿ ಕೇಳುವ ನೆಪದಲ್ಲಿ ಆಟೊ ನಿಲ್ಲಿಸಿ ಹಲ್ಲೆ ನಡೆಸಲಾಗಿತ್ತು. ಮುಸ್ತಫಾ ಮತ್ತು ನಾಸಿರ್ ಗಂಭೀರಗೊಂಡಿದ್ದರು. ನಾಸಿರ್ ಮರುದಿನ ಮೃತಪಟ್ಟಿದ್ದರು. 2016 ರ ಏಪ್ರಿಲ್ 12ರಂದು ಮುಂಜಾನೆ ಮೀನುಗಾರಿಕೆಗೆ ಹೋಗುತ್ತಿದ್ದಾಗ ರಾಜೇಶ್ ಕೋಟ್ಯಾನ್ ಎಂಬವರನ್ನು ದೊಣ್ಣೆಯಿಂದ ಹೊಡೆದು ಕೊಂದು ಮುಖವನ್ನು ಕಲ್ಲಿನಿಂದ ಜಜ್ಜಿ ಪರಿಚಯ ಸಿಗದಂತೆ ಮಾಡಲಾಗಿತ್ತು.