ಇಂದೋರ್: ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ದೇಹದಿಂದ ತೆಗೆದ ಕಿಡ್ನಿಯನ್ನು ಇನ್ನೊಬ್ಬ ವ್ಯಕ್ತಿಗೆ ಅಳವಡಿಸುವುದಕ್ಕಾಗಿ ಭೋಪಾಲ್ ನಿಂದ ಇಂದೋರ್ ಗೆ ಸುಮಾರು ಇನ್ನೂರು ಕಿ ಮೀ ಗ್ರೀನ್ ಕಾರಿಡಾರ್ ಮೂಲಕ ಯಶಸ್ವಿಯಾಗಿ ಸಾಗಿಸಲಾಗಿದೆ. ಗ್ರೀನ್ ಕಾರಿಡಾರ್ ಮೂಲಕ ಇನ್ನೂರು ಕಿ ಮೀ ದೂರವನ್ನು 2:45 ಗಂಟೆಯಲ್ಲಿ ತಲುಪಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಿಡ್ನಿ ಸಾಗಿಸುವ ಆಂಬುಲೆನ್ಸ್ ಹೋಗುವ ಮಾರ್ಗದಲ್ಲಿ ವಾಹನ ಸಂಚಾರ ನಿಯಂತ್ರಿಸುವ ಮೂಲಕ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಏ 12ರಂದು ಮಧ್ಯಪ್ರದೇಶದ ಸಾಗರ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಹರಿಶಂಕರ ಧಿಮೋಳೆ ಎಂಬರಿಗೆ ಮೆದುಳಿನ ರಕ್ತಸ್ರಾವವಾಗಿತ್ತು. ಕೂಡಲೇ ಅವರನ್ನು ಭೋಪಾಲ್ ನ ಬನ್ಸಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರಿಗೆ ಮೆದುಳು ನಿಷ್ಕ್ರಿಯಗೊಂಡಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದರು. ಅವರ ಕಿಡ್ನಿ ದಾನಕ್ಕೆ ಕುಟುಂಬಸ್ಥರು ಒಪ್ಪಿದ್ದರು. ಸಾಮಾನ್ಯವಾಗಿ ಈ ಮಾರ್ಗದಲ್ಲಿ ಚಲಿಸಲು ನಾಲ್ಕು ಗಂಟೆಗಳು ಬೇಕು. ಆದರೆ ಗ್ರೀನ್ ಕಾರಿಡಾರ್ ನಿರ್ಮಿಸಿದ್ದರಿಂದ 2:45 ಗಂಟೆಯೊಳಗೆ ತಲುಪಲಾಗಿದೆ.