ವಿಟ್ಲ: ಬಾವಿಗೆ ರಿಂಗ್ ಹಾಕುವಾಗ ಆಮ್ಲಜನಕದ ಕೊರತೆಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಕುಕ್ಕಿಪಾಡಿ ನಿವಾಸಿ, ಪ್ರಸ್ತುತ ಪರ್ತಿಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ ಮತ್ತು ಮಲಾರ್ ನಿವಾಸಿ ಆಲಿ ಮೃತರು. ಸುಮಾರು ಮೂವತ್ತು ಅಡಿ ಆಳದ ಬಾವಿಗೆ ರಿಂಗ್ ಹಾಕಿದ ನಂತರ ಕ್ಲೀನಿಂಗ್ ಗೆ ಇಳಿದ ಒಬ್ಬ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಾವಿಗೆ ಇಳಿದವನು ಮೇಲೆ ಬಾರದೆ ಇದ್ದಾಗ ಅವನನ್ನು ನೋಡಲು ಇನ್ನೊಬ್ಬ ಬಾವಿಗಿಳಿದಿದ್ದು, ಆತನೂ ಆಮ್ಲಜನಕದ ಕೊರತೆಯಾಗಿ ಮೃತಪಟ್ಟಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಫ್ರೆಂಡ್ಸ್ ವಿಟ್ಲ ಮುರಳೀಧರ ಅವರು ಎರಡೂ ಶವಗಳನ್ನು ಮೇಲೆ ತಂದಿದ್ದಾರೆ. ಮೃತದೇಹಗಳನ್ನು ವಿಟ್ಲ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತ ಇಬ್ರಾಹಿಂ ಅವರು ಕಳೆದ ಇಪ್ಪತ್ತು ವರ್ಷಗಳಿಂದ ರಿಂಗ್ ಹಾಕುವಲ್ಲಿ ಪರಿಣಿತರಾಗಿದ್ದರು.