ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ರಾಜ್ಯದ ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಮಾನ್ಯ ಶಾಸಕ ವಿ. ಸುನಿಲ್ ಕುಮಾರ್ ಅವರು ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ನಿರ್ಮಿಸಿದ ಮಹತ್ವಾಕಾಂಕ್ಷಿ ಯೋಜನೆಯಾದ ಪರಶುರಾಮ ಥೀಮ್ ಪಾರ್ಕ್, ಇಂದು ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಅವರ ದ್ವೇಷ ಹಾಗೂ ಮತ್ಸರದ ರಾಜಕಾರಣದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳು ಬಿದ್ದ ಸ್ಥಿತಿಗೆ ತಲುಪಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನನಿತ್ಯ ಪ್ರವಾಸಿಗರಿಂದ ತುಂಬಿ ತುಳುಕಬೇಕಾಗಿದ್ದ ಪರಶುರಾಮ ಥೀಮ್ ಪಾರ್ಕ್ ಇಂದು ಕಳ್ಳತನ ಹಾಗೂ ಅನೈತಿಕ ಚಟುವಟಿಕೆಗಳಿಗೆ ತಾಣವಾಗುವ ಭೀತಿಯ ಪರಿಸ್ಥಿತಿಗೆ ತಲುಪಿದೆ. ಇತ್ತೀಚೆಗೆ ಕಿಡಿಗೇಡಿಗಳು ಥೀಮ್ ಪಾರ್ಕ್ ಕಟ್ಟಡದ ಭೀಗ ಒಡೆದು ಮೇಲ್ಚಾವಣಿಯ ತಾಮ್ರದ ಹೊದಿಕೆಯನ್ನು ಕದ್ದೊಯ್ದಿರುವುದು ಅತ್ಯಂತ ಖೇದಕರ ಸಂಗತಿ. ಈ ದುಸ್ಥಿತಿಗೆ ನೇರ ಹೊಣೆ ಉದಯಕುಮಾರ್ ಶೆಟ್ಟಿಯವರದ್ದೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಥೀಮ್ ಪಾರ್ಕ್‌ನಲ್ಲಿ ನಡೆದ ಕಳ್ಳತನದ ಕುರಿತು ಮಾನ್ಯ ಶಾಸಕ ಸುನಿಲ್ ಕುಮಾರ್ ಅವರು ವ್ಯಕ್ತಪಡಿಸಿದ ಬೇಸರದ ಹೇಳಿಕೆಯನ್ನು ಟೀಕಿಸುವ ಭರದಲ್ಲಿ ಉದಯಕುಮಾರ್ ಶೆಟ್ಟಿ ಅವರು ಶಾಸಕರ ಬಗ್ಗೆ ತೀರಾ ಅವಹೇಳನಕಾರಿ ಪದಗಳನ್ನು ಬಳಸಿರುವುದು ರಾಜಕೀಯ ಸಭ್ಯತೆಯ ಎಲ್ಲೆ ಮೀರಿದ ವರ್ತನೆ ಎಂದು ನವೀನ್ ನಾಯಕ್ ಖಂಡಿಸಿದರು. ನಾಲ್ಕು ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿರುವ ಗೌರವಾನ್ವಿತ ವ್ಯಕ್ತಿಯ ಬಗ್ಗೆ ‘ನೀಚ’ ಎಂಬ ಪದ ಬಳಕೆ ಮಾಡಿರುವುದು ಉದಯಕುಮಾರ್ ಶೆಟ್ಟಿ ಅವರ ಸಂಸ್ಕೃತಿ ಹಾಗೂ ನಡವಳಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಟೀಕಿಸಿದರು.
ಕಾರ್ಕಳದಲ್ಲಿ ಇದುವರೆಗೂ ನಡೆದುಕೊಂಡು ಬಂದಿದ್ದ ಉತ್ತಮ ರಾಜಕೀಯ ಸಂಸ್ಕೃತಿಯನ್ನು ಹಾಳು ಮಾಡಿದ ಕೀರ್ತಿ ಉದಯಕುಮಾರ್ ಶೆಟ್ಟಿಯವರಿಗೆ ಸಲ್ಲುತ್ತದೆ ಎಂದು ಆರೋಪಿಸಿದ ನವೀನ್ ನಾಯಕ್, “ರಾಜಕೀಯದಲ್ಲಿ ಯಾರೂ ಶಾಶ್ವತವಲ್ಲ. ನೀವು ಮಾಡಿರುವ ತಪ್ಪು ನಿಮಗೆ ತಿಳಿದಿದೆ. ಹತಾಶೆಯಿಂದ ಅಸಂಬದ್ಧ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು” ಎಂದು ಸಲಹೆ ನೀಡಿದರು.
ಪರಶುರಾಮ ಥೀಮ್ ಪಾರ್ಕ್‌ಗೆ ಬಾಕಿ ಇರುವ ಅನುದಾನವನ್ನು ಬಿಡುಗಡೆಗೊಳಿಸಿ, ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ತೆರೆಯುವ ಮೂಲಕ ತಮ್ಮ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಬೇಕು ಎಂದು ಬಿಜೆಪಿ ಸದಾ ಆಗ್ರಹಿಸುತ್ತಿದೆ ಎಂದು ಅವರು ಹೇಳಿದರು. ಇಲ್ಲವಾದಲ್ಲಿ ಮುಂದುವರಿದ ಟೀಕೆಗಳಿಗೆ ಬಿಜೆಪಿ ತಕ್ಕ ಉತ್ತರ ನೀಡಲಿದೆ ಎಂದು ಎಚ್ಚರಿಸಿದರು.
