ತುಳುನಾಡಿನ ಸೃಷ್ಟಿಕರ್ತ ಪರಶುರಾಮನ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಿದರೆ ಕಾಂಗ್ರೆಸ್ ನವರಿಗೇಕೆ ಹೊಟ್ಟೆಉರಿ? : ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪ್ರಶ್ನೆ
ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ. ಕರಾವಳಿಯ ತುಳುನಾಡಿನ ಸೃಷ್ಟಿಕರ್ತ ಪರಶುರಾಮನ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಿದರೆ ಕಾಂಗ್ರೆಸ್ ನವರಿಗೆ ಏಕೆ ಹೊಟ್ಟೆ ಉರಿ? ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪ್ರಶ್ನಿಸಿದ್ದಾರೆ.
ಅವರು ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ಸಿನ ದಬ್ಬಾಳಿಕೆ ರಾಜಕಾರಣದ ವಿರುದ್ಧ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯ ಬಳಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ದೇಶದ ಇತಿಹಾಸ, ರಾಮ ದೇವರು, ಹಿಂದುತ್ವವನ್ನು ಒಪ್ಪುವುದಿಲ್ಲ ಎಂಬುವುದು ಕಾಂಗ್ರೆಸ್ಸಿನವರ ನಡುವಳಿಕೆಯಿಂದ ಪದೇ ಪದೇ ಸಾಬೀತಾಗುತ್ತಿದೆ. ಬೆಂಗಳೂರಿನಿಂದ-ಮೈಸೂರಿನವರೆಗೆ ನಡೆಯುತ್ತಿರುವ ಬಿಜೆಪಿ ಪಾದಯಾತ್ರೆಯಿಂದ ಕಾಂಗ್ರೆಸ್ಸಿನ ಹಗರಣಗಳು ಲೋಕಕ್ಕೆ ಗೊತ್ತಾಗಿದೆ. ಇದರಿಂದ ಕಾಂಗ್ರೆಸ್ ನವರಿಗೆ ಭಯ ಶುರುವಾಗಿದೆ. ಹೀಗಾಗಿ ಅವರೇ ಸೃಷ್ಟಿಸಿರುವ ಪರಶುರಾಮ ಥೀಮ್ ಪಾರ್ಕ್ ಪ್ರಕರಣದ ತನಿಖೆಗೆ ಸ್ವಯಂ ವೇಗ ನೀಡಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರಕಾರದಲ್ಲಿ ಎಲ್ಲ ಸಾಧ್ಯತೆಗಳಿರುತ್ತದೆ. ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರನ್ನು ಪೊಲೀಸ್ ಇಲಾಖೆಗೆ ನೇಮಕ ಮಾಡಿಕೊಂಡರೂ ಅಚ್ಚರಿ ಪಡಬೇಕಾಗಿಲ್ಲ. ಕಾಂಗ್ರೆಸ್ ಹಾಗೂ ಪೊಲೀಸ್ ಇಲಾಖೆ ಒಂದೇ ಆದ್ದರಿಂದ ಸ್ವಲ್ಪ ದಿನ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಲಿ ಎನ್ನುವ ಕಾರಣಕ್ಕೆ ಉದಯಕುಮಾರ್ ಶೆಟ್ಟಿ ಅವರನ್ನು ನೇಮಕ ಮಾಡಿಕೊಂಡಿದ್ದಾರೋ ಏನೋ ಗೊತ್ತಿಲ್ಲ. ಅದರ ಬಗ್ಗೆಯೂ ಸೂಕ್ತ ತನಿಖೆ ಆಗಬೇಕು ಎಂದರು.
ಕಾರ್ಕಳದಲ್ಲಿ ಕಾಂಗ್ರೆಸ್ ಇದ್ದ ಕಾಲ ಘಟ್ಟ ಹಾಗೂ ಬಿಜೆಪಿ ಇದ್ದ ಕಾಲ ಘಟ್ಟದಲ್ಲಿನ ಅಭಿವೃದ್ಧಿಯ ತುಲನೆಯನ್ನು ಜನತೆ ಮಾಡಬೇಕು. ಕಾಂಗ್ರೆಸ್ ನವರಿಗೆ ಅಭಿವೃದ್ಧಿ ಬೇಕಿಲ್ಲ ಎಂದರು.
ಹಗರಣಗಳನ್ನೇ ಮಾಡುವ ವ್ಯಕ್ತಿತ್ವ ಕಾಂಗ್ರೆಸ್ಸಿನದ್ದು. ಇಂತಹ ಮನಸ್ಥಿತಿಯುಳ್ಳ ಕಾಂಗ್ರೆಸ್ ಇವತ್ತು ಪರಶುರಾಮ ಥೀಮ್ ಪಾರ್ಕ್ ವಿಚಾರದ ಬಗ್ಗೆ ಮಾತನಾಡುತ್ತದೆ. ಅಭಿವೃದ್ಧಿಯೇ ಬೇಡವಾದವರಿಗೆ ಪರಶುರಾಮರ ಥೀಮ್ ಪಾರ್ಕ್ ನಿರ್ಮಾಣ ಮಾಡುವ ಅಗತ್ಯ ಕಾಣುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದೆ. ಶಿಲ್ಪಿ ಕೃಷ್ಣ ನಾಯ್ಕ ಅವರನ್ನೇ ನಿಂದಿಸುವ ಕಾರ್ಯವನ್ನು ಉದಯ ಶೆಟ್ಟಿ ಮಾಡಿದ್ದಾರೆ. ಇದು ಬಹಳ ಆತಂಕ ತರುವ ವಿಚಾರ. ನಮ್ಮ ಅಗ್ರಹಕ್ಕೆ ಜಿಲ್ಲಾಧಿಕಾರಿಗಳು ಸ್ಪಂದಿಸಬೇಕು. ಹೀನ ರಾಜಕೀಯ ಕೊನೆಗಾಣ ಬೇಕು ಎಂದರು.
ಬಿಜೆಪಿ ಕಾರ್ಕಳ ಮಂಡಲ ಅಧ್ಯಕ್ಷ ನವೀನ್ ನಾಯ್ಕ್ ಮಾತನಾಡಿ, ಉದಯಕುಮಾರ್ ಶೆಟ್ಟಿ ಅವರಿಗೆ ಕಾರ್ಕಳದಲ್ಲಿ ಪರಶುರಾಮನ ಮೂರ್ತಿ ನಿರ್ಮಾಣ ಆಗಬೇಕಂತಿಲ್ಲ. ಅವರಿಗೆ ಬೇಕಿರುವುದು ರಾಜಕೀಯ ಲಾಭ ಅಷ್ಟೇ. ಅಯೋಧ್ಯೆಯ ರಾಮನ ಮೂರ್ತಿಯನ್ನು ವರ್ಷಾನುಗಟ್ಟಲೇ ಟೆಂಟ್ ನಲ್ಲಿ ಇಟ್ಟ ಕಾಂಗ್ರೆಸ್ ನವರು, ಇಂದು ಪರಶುರಾಮನ ಮೂರ್ತಿಯನ್ನು ಕಾರ್ಕಳ ಪೊಲೀಸ್ ಠಾಣೆಯ ಗೋಡೌನ್ ನಲ್ಲಿ ಹಾಕಿದ್ದಾರೆ ಎಂದು ಆರೋಪಿಸಿದರು.
ಕಾರ್ಕಳ ಕಾಂಗ್ರೆಸ್‌ನ ಅತೃಪ್ತ ಆತ್ಮಗಳಿಂದಾಗಿ, ಪರಶುರಾಮ ಥೀಮ್ ಪಾರ್ಕ್ ಸೇರಿದಂತೆ ಅಭಿವೃದ್ಧಿಯಲ್ಲಿ ಕೀಳು ಮಟ್ಟದ ರಾಜಕೀಯ ನಡೆಯುತ್ತಿದೆ. ಕಾರ್ಕಳದ ಪರಶುರಾಮ್ ಥೀಮ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ಆಧಾರ ರಹಿತ ಆರೋಪದಲ್ಲಿ ತೊಡಗಿದ್ದು, ಪ್ರಸ್ತುತ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಪ್ರತಿಮೆ ನಿರ್ಮಿಸಿದ ಶಿಲ್ಪಿಯ ಬೆಂಗಳೂರು ಗೋಡೌನ್ ಗೆ ತೆರಳಿ ಕಾಂಗ್ರೆಸ್ ನ ಮುಖಂಡರು ದಬ್ಬಾಳಿಕೆ ನಡೆಸಿದ್ದಾರೆ. ಪರಶುರಾಮ ಮೂರ್ತಿಯ ಕೆಲಸವನ್ನು ಸಂಪೂರ್ಣಗೊಳಿಸಲು ಶಿಲ್ಪಿ ಕೃಷ್ಣ ನಾಯ್ಕ್ ಪ್ರಯತ್ನ ಪಡುತ್ತಿದ್ದಾರೆ. ಆದರೆ ಕಾಂಗ್ರೆಸ್ ನವರಿಗೆ ಅದು ಬೇಕಿಲ್ಲ ಎಂದು ಟೀಕಿಸಿದರು.
ಕಾರ್ಕಳ ಕಾಂಗ್ರೆಸ್ ನ ಅತೃಪ್ತ ಆತ್ಮಗಳಿಂದಾಗಿ ಪರಶುರಾಮರ ಮೂರ್ತಿಯನ್ನು ಸಂಪೂರ್ಣ ಮಾಡಲಾಗದಂತಾಗಿದೆ. ಶಿಲ್ಪಿ ಮಾಡಿದ ಕಂಚಿನ ಮೂರ್ತಿಯನ್ನು ಪೊಲೀಸ್ ಠಾಣೆಯಲ್ಲಿಡುವ ನೀಚ ಕಾರ್ಯವನ್ನು ಇಂದು ಕಾಂಗ್ರೆಸ್ ಮಾಡಿದೆ. ಶಿಲ್ಪಿಯ ಕಾರ್ಯಕ್ಕೆ ತಡೆ ಒಡ್ಡಲು ಕಾಂಗ್ರೆಸ್ ನ ಉದಯ ಕುಮಾರ ಶೆಟ್ಟಿಯವರೇ ಪ್ರಯತ್ನ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ಕಾರ್ಕಳದ ವೃತ್ತ ನಿರೀಕ್ಷಕರು ಕಾರ್ಯ ನಿರ್ವಹಿಸಿದ್ದಾರೆ ಎಂದು ಅವರು ಆರೋಪಿಸಿದರು.
ಬೆಂಗಳೂರಿನಲ್ಲಿ ಉದಯ ಕುಮಾರ ಶೆಟ್ಟಿಯವರು ಕೃಷ್ಣ ನಾಯ್ಕ್ ರವರ ಮನೆಗೆ ಬಂದಾಗ ಕಾರ್ಕಳದ ವೃತ್ತ ನಿರೀಕ್ಷಕರು ಉದಯಕುಮಾರ್ ಶೆಟ್ಟಿಯವರನ್ನು ಕಂಡು ಸಚಿವರಿಗೆ ಸ್ವಾಗತ ಕೋರುವ ರೀತಿಯ ವರ್ತನೆ ಮಾಡಿದ್ದಾರೆ. ವೃತ್ತ ನಿರೀಕ್ಷಕರನ್ನು ಅಮಾನತು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಗೋಪಾಲ ಭಂಡಾರಿ, ವೀರಪ್ಪ ಮೊಯಿಲಿಯವರ ಕಾಲಘಟ್ಟದಲ್ಲಿ ಸೌಹಾರ್ದ ರಾಜಕಾರಣ ಕಾರ್ಕಳದಲ್ಲಿ ಇತ್ತು. ಆದರೆ ಉದಯ ಕುಮಾರ ಶೆಟ್ಟಿಯವರು ಕಾಂಗ್ರೆಸ್ಸಿಗೆ ಬಂದ ನಂತರ ಕಾರ್ಕಳದಲ್ಲಿ ದ್ವೇಷ ರಾಜಕಾರಣ ಮಾಡುವಂತಾಗಿದೆ ಎಂದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿ ಉಮಿಕಲ್ ಬೆಟ್ಟದಲ್ಲಿ ಇದ್ದ ಕೃಷರ್ ಅನ್ನು ಉಳಿಸಲು ಕಾಂಗ್ರೆಸ್ ಪರಶುರಾಮ ಮೂರ್ತಿ ನಿರ್ಮಾಣಕ್ಕೆ ಅಡ್ಡಗಾಲನ್ನು ಹಾಕುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಸುನೀಲ್ ಕುಮಾರ್ ಸಚಿವರಾಗಿದ್ದ ಸಂದರ್ಭದಲ್ಲಿ ಪರಶುರಾಮರ ಮೂರ್ತಿ ನಿರ್ಮಾಣ ಮಾಡಬೇಕು ಎಂಬ ಆಶಯ ಅವರಿಗಿತ್ತು. ಉದಯ ಕುಮಾರ್ ಶೆಟ್ಟಿಯವರು ಕಾರ್ಕಳ ಕಾಂಗ್ರೆಸ್ ಗೆ ಬಂದ ನಂತರ ಕಾರ್ಕಳದಲ್ಲಿ ದ್ವೇಷ ರಾಜಕಾರಣ ಹೆಚ್ಚಾಗಿದೆ ಎಂದರು.
ಸುನಿಲ್ ಕುಮಾರ್ ನೇತೃತ್ವದಲ್ಲಿ ಕಾರ್ಕಳದಲ್ಲಿ ರೂ.3,000 ಕೋಟಿಯಷ್ಟು ಅಭಿವೃದ್ಧಿ ಕಾರ್ಯ ಆಗಿದೆ. ಪರಶುರಾಮ ಥೀಮ್ ಪಾರ್ಕ್ ಗೆ ಮಂಜೂರಾದ ಮೊತ್ತ ರೂ.6.72 ಕೋಟಿ ಮಾತ್ರ. ಇದರಲ್ಲಿ ಅವ್ಯವಹಾರ ಮಾಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು. ಉದಯ ಕುಮಾರ್ ಶೆಟ್ಟಿಯವರ ಆಟಾಟೋಪಗಳು ಹೀಗೆ ಮುಂದುವರಿದರೆ ಉದಯ ಕುಮಾರ್ ಶೆಟ್ಟಿಯವರ ಮನೆಗೆ ಮುತ್ತಿಗೆ ಹಾಕುವುದಾಗಿ ಹೇಳಿದರು. ನೀವು ಹೀಗೆ ಬಾಲ ಅಲ್ಲಾಡಿಸಿದ್ರೆ ಬಾಲ ಕಟ್ ಮಾಡುವ ಕಾರ್ಯವನ್ನು ಬಿಜೆಪಿ ಮಾಡುತ್ತದೆ ಎಂದು ಹೆಗ್ದೆ ತಿಳಿಸಿದರು. ಪ್ರತಿಭಟನಾ ಸಭೆಯ ಬಳಿಕ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರುಗಳಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಿರಣ್ ಕುಮಾರ್ ಬೈಲೂರು, ಜಯರಾಮ್ ಸಾಲ್ಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿಗಳಾದ ರಾಘವೇಂದ್ರ ಕುಂದರ್, ಉದಯ ಎಸ್. ಕೋಟ್ಯಾನ್, ಶ್ರೀಕಾಂತ್ ನಾಯಕ್, ಅನಿತಾ ಶ್ರೀಧರ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ವಕ್ತಾರರಾದ ಗೀತಾಂಜಲಿ ಎಮ್. ಸುವರ್ಣ, ವಿಜಯಕುಮಾರ್ ಉದ್ಯಾವರ, ಮಾಧ್ಯಮ ಪ್ರಮುಖ್ ಗಿರೀಶ್ ಎಮ್. ಅಂಚನ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಪ್ರಧಾನ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಿ. ಶೆಟ್ಟಿ, ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣರಾವ್ ಮಟ್ಟು, ಕಾರ್ಕಳ ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ, ಕಾರ್ಕಳ ತಾಲೂಕು ಉಪಾಧ್ಯಕ್ಷ ಅನಂತಕೃಷ್ಣ ಶೆಣೈ, ಕಾರ್ಯದರ್ಶಿಗಳಾದ ಪ್ರವೀಣ್ ಸಾಲ್ಯಾನ್, ಕರುಣಾಕರ ಕೋಟ್ಯಾನ್, ಕಾರ್ಕಳ ಮಹಿಳಾ ಮೋರ್ಚಾ ಅಧ್ಯಕ್ಷೆ ವಿನಯ ಡಿ. ಬಂಗೇರ, ಪ್ರಮುಖರಾದ ಶಂಕರ್ ಕುಂದರ್, ವೀಣಾ ಎಸ್. ಶೆಟ್ಟಿ, ರಾಕೇಶ್ ಶೆಟ್ಟಿ ಕುಕ್ಕುಂದೂರು, ರಮೇಶ್ ಪೂಜಾರಿ ಶಿವಪುರ, ಸುಮಿತ್ ಕೌಡೂರು, ಮಾಲಿನಿ ಜೆ. ಶೆಟ್ಟಿ, ಸೋಜನ್ ಜೇಮ್ಸ್, ರವೀಂದ್ರ ಮೊಯ್ಲಿ, ಸಚ್ಚಿದಾನಂದ ಶೆಟ್ಟಿ ಬೈಲೂರು, ಭರತ್ ತಿರುವತ್ತೂರು, ನಿರಂಜನ್ ಜೈನ್, ಕಿಶೋರ್ ಕರಂಬಳ್ಳಿ, ಗುರುಪ್ರಸಾದ್ ಹಾಗೂ ಪಕ್ಷದ ಪ್ರಮುಖರು, ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಸಹಿತ ವಿವಿಧ ಸರದ ಪದಾಧಿಕಾರಿಗಳು, ಉಡುಪಿ ನಗರಸಭೆ ಮತ್ತು ಕಾರ್ಕಳ ಪುರಸಭೆ ಸದಸ್ಯರು, ವಿವಿಧ ಸ್ತರದ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.