ಉಡುಪಿ: ಇತ್ತೀಚೆಗೆ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ, ಉಡುಪಿ ನಗರದಲ್ಲಿ ಗ್ಯಾಂಗ್ ವಾರ್ ಮಾಡಿ ಜೈಲು ಸೇರಿದ್ದ ಗರುಡ ಗ್ಯಾಂಗ್ ಆರೋಪಿಗಳು ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿ ಜೈಲು ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ ಬಗ್ಗೆ ವರದಿಯಾಗಿದೆ.
ವಿಚಾರಣಾಧೀನ ಕೈದಿಗಳಾದ ಮೊಹಮ್ಮದ್ ಆಶಿಕ್ ಮತ್ತು ಮುಹಮ್ಮದ್ ಸಕ್ಲೇನ್ ಜಿಲ್ಲಾ ಜೈಲು ಅಧೀಕ್ಕಕ, ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಪಿಜನ್ ಕಾಲ್ ಸಿಸ್ಟಮ್ ಕರೆ ಮಾಡಲು ತಡವಾಯಿತೆಂದು ತಗಾದೆ ತೆಗೆದು ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಹಲ್ಲೆಗೆ ಆರೋಪಿಗಳು ಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ಕರೆ ಮಾಡಲು ತಡವಾಯಿತೆಂದು ಜೈಲರ್ ಎಸ್.ಎ. ಶಿರೋಳಗೆ ಅವಾಚ್ಯ ಶಬ್ದಗಳಿಂದ ಆರೋಪಿಗಳು ನಿಂದಿಸಿದ್ದಾರೆ. ಜಿಲ್ಲಾ ಕಾರಾಗೃಹ ಅಧೀಕ್ಷಕ ಸಿದ್ಧರಾಮ ಬಿ. ಪಾಟೀಲ್ ಹಾಗೂ ಸಿಬ್ಬಂದಿಗಳನ್ನು ತಳ್ಳಿ ಕೊಠಡಿಯಲ್ಲಿದ್ದ ಕುರ್ಚಿಯಿಂದ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ ಅಡುಗೆ ಕೋಣೆಯಲ್ಲಿದ್ದ ಚಹಾ ಪಾತ್ರೆಯಿಂದ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.