ಉಡುಪಿ: ಮುಂಬೈನಿಂದ ಉಡುಪಿಗೆ ರೈಲಿನಲ್ಲಿ ಬಂದಿದ್ದ ಕುಟುಂಬವೊಂದರ ₹63 ಲಕ್ಷ ಮೌಲ್ಯದ ಚಿನ್ನಾಭರಣ ರೈಲಿನಲ್ಲಿ ಕಳವಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈನಲ್ಲಿ ನೆಲೆಸಿರುವ ಅವಿನಾಶ್ ಎಂಬುವವರು ಕುಟುಂಬದವರೊಂದಿಗೆ ನ.15ರಂದು ಸಿಎಸ್‌ಟಿ- ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಮುಂಬೈನಿಂದ ಹೊರಟಿದ್ದರು.
ಒಡವೆ ಹಾಗೂ ಬಟ್ಟೆಗಳಿದ್ದ ನಾಲ್ಕು ಸೂಟ್‌ಕೇಸ್‌ಗಳನ್ನು ಬೀಗ ಹಾಕದೇ ಜಿಪ್ ಲಾಕ್ ಮಾಡಿ ಸೀಟಿನ ಕೆಳಗೆ ಇಟ್ಟಿದ್ದರು. ನ.16ರಂದು ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ಮನೆಗೆ ಹೋಗಿ ಬ್ಯಾಗ್‌ಗಳನ್ನು ತೆರೆದಾಗ ಎರಡು ಬ್ಯಾಗ್‌ಗಳಲ್ಲಿ ಇಟ್ಟಿದ್ದ ₹63 ಲಕ್ಷ ಬೆಲೆ ಬಾಳುವ 900 ಗ್ರಾಂ ತೂಕದ ಚಿನ್ನದ ಒಡವೆಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಒಡವೆಗಳನ್ನು ಪನ್‌ವೆಲ್‌ನಿಂದ ಕಣಕವಲಿ ರೈಲು ನಿಲ್ದಾಣಗಳ ಮಧ್ಯೆ ಕಳವು ಮಾಡಿರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂಬಂಧಿಯ ಮದುವೆ ಸಮಾರಂಭಕ್ಕಾಗಿ ಇವರು ಮುಂಬೈನಿಂದ ಊರಿಗೆ ಬಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.